ಬ್ಯಾಂಕ್ ಬಗ್ಗೆ ಐಐಟಿ-ಬಾಂಬೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಇತರ ಬ್ಯಾಂಕುಗಳು, ಝೀರೋ ಬ್ಯಾಲೆನ್ಸ್ ಅಕೌಂಟ್ ಅಥವಾ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಖಾತೆಗಳ ಕೆಲವು ಸೇವೆಗಳ ಮೇಲೆ ಅನಿಯಂತ್ರಿತ ಶುಲ್ಕವನ್ನು ಸಂಗ್ರಹಿಸಿವೆ ಎಂಬುದು ಅಧ್ಯಯನದಿಂದ ಹೊರಬಿದ್ದಿದೆ.
ನಾಲ್ಕು ವಹಿವಾಟಿನ ನಂತ್ರ ಉಳಿದ ಪ್ರತಿ ವಹಿವಾಟಿಗೆ ಕಂಪನಿ 17.70 ರೂಪಾಯಿ ಶುಲ್ಕ ವಿಧಿಸಿದೆ. 2015-20ನೇ ಸಾಲಿನಲ್ಲಿ ಎಸ್‌ಬಿಐ ಉಳಿತಾಯ ಖಾತೆ ಹೊಂದಿರುವ 12 ಕೋಟಿ ಖಾತೆದಾರರಿಗೆ ಸೇವಾ ಶುಲ್ಕ ವಿಧಿಸುವ ಮೂಲಕ 300 ಕೋಟಿ ರೂಪಾಯಿ ಸಂಗ್ರಹಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 3.9 ಕೋಟಿ ಖಾತೆದಾರರಿಂದ 9.9 ಕೋಟಿ ರೂಪಾಯಿ ಸಂಗ್ರಹಿಸಿದೆ.
ಐಐಟಿ-ಬಾಂಬೆ ಅಧ್ಯಯನವು, ಕೆಲವು ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದಿದೆ. ಐಐಟಿ ಬಾಂಬೆಯ ಪ್ರಾಧ್ಯಾಪಕ ಆಶಿಶ್ ದಾಸ್, ಡಿಜಿಟಲ್ ಪಾವತಿ ಸೇರಿದಂತೆ ತಿಂಗಳಿಗೆ ನಾಲ್ಕು ಬಾರಿಗಿಂತ ಹೆಚ್ಚು ವಹಿವಾಟು ನಡೆಸಿದ ಖಾತೆದಾರರಿಗೆ ಪ್ರತಿ ಬಾರಿ 17.70 ರೂಪಾಯಿ ಶುಲ್ಕ ವಿಧಿಸುವುದು ರಿಸರ್ವ್ ಬ್ಯಾಂಕಿನ ನಿಯಮದ ಉಲ್ಲಂಘನೆಯಾಗಿದೆ.
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯಡಿ ಬಿಎಸ್‌ಬಿಡಿ ಖಾತೆದಾರರಿಗೆ ನಗದು ರಹಿತ ಡಿಜಿಟಲ್ ವಹಿವಾಟಿನ ಸೇವೆಯ ಮೇಲೆ ಭಾರಿ ಶುಲ್ಕ ವಿಧಿಸಿದೆ ಎಂದು ಐಐಟಿ ಬಾಂಬೆ ವರದಿ ಮಾಡಿದೆ. ದೇಶದಲ್ಲಿ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲಾಗ್ತಿದೆ. ಆದ್ರೆ ಎಸ್ಬಿಐ ಅದಕ್ಕೆ ಶುಲ್ಕ ವಿಧಿಸುತ್ತಿರುವುದು ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.