ಧಾರವಾಡ: ಗ್ರಾಹಕನ ಜೊತೆ ನಿರ್ಲಕ್ಷ್ಯತನ ತೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ.1 ಲಕ್ಷ 10 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ ಸಾಲದ ಬಾಕಿ ಅಥವಾ ಬೇರೆ ಯಾವುದೇ ರೀತಿಯ ಹಣ ಕೊಡುವುದು ಬಾಕಿ ಇರದಿದ್ದರೂ ನಿಮ್ಮ ಹೆಸರಿನಲ್ಲಿ ನಮ್ಮ ಬ್ಯಾಂಕಿನಲ್ಲಿ ಸಾಲದ ಬಾಕಿ ಇದೆ ಮತ್ತು ನೀವು ಸುಸ್ತಿ ಬಾಕಿದಾರ ಇದ್ದೀರಿ ಕಾರಣ ನೀವು ಲೋಕ ಅದಾಲತ್‍ನಲ್ಲಿ ಅಥವಾ ನಮ್ಮ ಬ್ಯಾಂಕಿಗೆ ಬಂದು ಮಾತನಾಡಿ ಸಾಲದ ಹಣ ಕಟ್ಟುವಂತೆ ಧಾರವಾಡದ ಹೆಚ್.ಡಿ.ಎಮ್.ಸಿ ಸರ್ಕಲ್‍ನ ಮತ್ತು ಹುಬ್ಬಳ್ಳಿ ಕೇಶ್ವಾಪುರದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕ್ ನಿಂದ ಧಾರವಾಡದ ಯಾದಗಿರಿ ಚಾಳಿನ ಕರುಣಾಕರ ಅವರಿಗೆ ಹಲವಾರು ಬಾರಿ ನೋಟಿಸು ಕೊಟ್ಟು ಒತ್ತಾಯಪಡಿಸಲಾಗಿತ್ತು.
ತನಗೆ ಸುಸ್ತಿ ಬಾಕಿದಾರ ಎಂದು ಬ್ಯಾಂಕಿನವರು ಹೇಳಿದ್ದರಿಂದ ತನ್ನ ಗೌರವಕ್ಕೆ ಚ್ಯುತಿ ಬಂದಿದೆ ಮತ್ತು ತನಗೆ ಬ್ಯಾಂಕಿನವರಿಂದ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಅವರ ಕ್ರಮವನ್ನು ಪ್ರಶ್ನಿಸಿ ಕರುಣಾಕರ ಶೆಟ್ಟಿ ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪರಿಹಾರ ಕೇಳಿ ದೂರು ದಾಖಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಆಯೋಗ ಯಾವುದೇ ರೀತಿಯ ಸಾಲ ಕೊಡುವುದು ಬಾಕಿ ಇರದಿದ್ದರೂ ಗ್ರಾಹಕ ಕರುಣಾಕರ ಶೆಟ್ಟಿಗೆ ಸುಸ್ತಿ ಬಾಕಿದಾರ ಇತ್ಯಾದಿಯಾಗಿ ಹೆಸರಿಸಿ, ಹಲವು ಬಾರಿ ನೋಟಿಸು ನೀಡಿರುವುದರಿಂದ ಗ್ರಾಹಕನ ವರ್ಚಸ್ಸಿಗೆ ಕುಂದು ಉಂಟಾಗಿದೆ. ಇದರ ಪರಿಣಾಮವಾಗಿ ಸೇವಾ ನ್ಯೂನ್ಯತೆ ಆಗಿದೆ ಅಂತಾ ಅಭಿಪ್ರಾಯಪಟ್ಟು ಸ್ಟೇಟ್ ಬ್ಯಾಂಕನವರು ದೂರುದಾರ ಕರುಣಾಕರ ಶೆಟ್ಟಿಗೆ 1,10,000 ರೂ. ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವ್ಹಿ.ಎ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ತೀರ್ಪು ನೀಡಿದ್ದಾರೆ.