ನವದೆಹಲಿ: ಡಿಸೆಂಬರ್ 13 ರಿಂದ ಅನ್ವಯವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್.ಡಿ. ಬಡ್ಡಿ ದರ ಹೆಚ್ಚಳ ಮಾಡಿದೆ.
ಆಯ್ದ ಮೆಚ್ಯುರಿಟಿ ಅವಧಿಗಳಿಗೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡ 0.65 ರವರೆಗೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಗರಿಷ್ಠ 7.25ರ ವರೆಗಿನ ಬಡ್ಡಿ ನೀಡಲಾಗುವುದು.
ಎರಡು ಕೋಟಿ ರೂ ಗಿಂತ ಕಡಿಮೆ ಇರುವ ರಿಟೇಲ್ ನಿಶ್ಚಿತ ಠೇವಣಿಗಳ ಮೇಲೆ ಪರಿಷ್ಕೃತ ಬಡ್ಡಿ ದರಗಳು ಡಿಸೆಂಬರ್ 13 ರಿಂದ ಅನ್ವಯವಾಗುತ್ತವೆ.
7 ರಿಂದ 45 ದಿನಗಳಿಗೆ ಶೇಕಡ 3 ರಷ್ಟು, 46 ರಿಂದ 179 ದಿನಗಳಿಗೆ ಶೇಕಡ 4.5 ರಷ್ಟು ಬಡ್ಡಿದರ ನೀಡಲಾಗುವುದು. 180 ರಿಂದ 210 ದಿನಗಳಿಗೆ ಶೇಕಡ 5.25 ರಷ್ಟು, 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಶೇಕಡ 5.50 ಯಿಂದ ಶೇಕಡ 5.75 ರಷ್ಟು ಬಡ್ಡಿದರ ನೀಡಲಾಗುವುದು.
1 ರಿಂದ 2 ವರ್ಷದ ಅವಧಿಗೆ ಶೇಕಡ 6.10 ರಿಂದ ಶೇಕಡ 6.75 ರಷ್ಟು, 2 ರಿಂದ 3 ವರ್ಷದ ಅವಧಿಗೆ ಶೇಕಡ 6.25 ರಿಂದ ಶೇಕಡ 6.75 ರಷ್ಟು ಬಡ್ಡಿದರ ನೀಡಲಾಗುವುದು.
ಹಿರಿಯ ನಾಗರಿಕರ ನಿಶ್ಚಿತ ಠೇವಣಿಗಳಿಗೆ ಎಲ್ಲಾ ಅವಧಿಗೂ ಹೆಚ್ಚುವರಿಯಾಗಿ ಶೇಕಡ 0.50 ರಷ್ಟು ಬಡ್ಡಿದರ ನೀಡಲಾಗುವುದು. ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷದಲ್ಲಿ ಮೆಚ್ಯುರ್ ಆಗುವ ನಿಶ್ಚಿತ ಠೇವಣಿಗಳ ಮೇಲೆ ಶೇಕಡ 3.5 ರಿಂದ ಶೇಕಡ 7.25 ವರೆಗೆ ಬಡ್ಡಿ ದರ ಪಡೆಯಲಿದ್ದಾರೆ.
ಆರ್.ಬಿ.ಐ. ಹಣದುಬ್ಬರ ತಡೆಗೆ ರೆಪೊ ದರ ಏರಿಕೆ ಮಾಡುತ್ತಿದ್ದು, ಸತತ ಐದನೇ ಬಾರಿಗೆ ರೆಪೊ ದರದಲ್ಲಿ ಹೆಚ್ಚಳ ಮಾಡಲಾಗಿದೆ. ರೆಪೊ ದರ ಶೇಕಡ 6.25 ಕ್ಕೆ ತಲುಪಿದ್ದು, ಇದರ ಪರಿಣಾಮ ಗೃಹ, ವಾಹನ, ವೈಯಕ್ತಿಕ, ವಿವಿಧ ಸಾಲಗಳ ಬಡ್ಡಿದರ ಏರಿಕೆಯಾಗಿ ಗ್ರಾಹಕರ ಇಎಂಐ ಹೊರೆ ಹೆಚ್ಚಿದೆ. ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ ಮಾಡಿ ಹೂಡಿಕೆದಾರರಿಗೆ ಉತ್ತೇಜನ ನೀಡಲಾಗುತ್ತಿದೆ. ರೆಪೊ ದರ ಕುಸಿತವಾದ ಸಂದರ್ಭದಲ್ಲಿ ಎಫ್.ಡಿ. ಮತ್ತು ಆರ್.ಡಿ. ಮೇಲಿನ ಬಡ್ಡಿ ದರ ಕುಸಿದಿತ್ತು.