
ಬೆಂಗಳೂರು: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕ ಸೇವಾ ಕೇಂದ್ರಗಳನ್ನು ಆರಂಭಿಸಿದೆ.
ರಾಜ್ಯಾದ್ಯಂತ 501 ಗ್ರಾಹಕ ಸೇವಾ ಕೇಂದ್ರಗಳನ್ನು ಬುಧವಾರದಿಂದ ಆರಂಭಿಸಿರುವುದಾಗಿ ಎಸ್ಬಿಐ ತಿಳಿಸಿದೆ. ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಜನ ಉಳಿತಾಯ ಖಾತೆ ತೆರೆಯಬಹುದಾಗಿದೆ. ಅಲ್ಲದೆ, ಕೆಲವು ಬಿಲ್ ಗಳನ್ನು ಪಾವತಿಸಲು, ಹಣ ವರ್ಗಾವಣೆ ಕೂಡ ಮಾಡಬಹುದಾಗಿದೆ.
ಇದರೊಂದಿಗೆ ತಮ್ಮ ಪಾಸ್ ಪುಸ್ತಕಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಕೆವೈಸಿ ಮಾಹಿತಿಗಳನ್ನು ಕೂಡ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನರಿಗೆ ಇನ್ನಷ್ಟು ಸೇವೆ ಒದಗಿಸುವ ಉದ್ದೇಶದಿಂದ ಗ್ರಾಹಕ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ.