ಶೂನ್ಯ ಬ್ಯಾಲೆನ್ಸ್ ಖಾತೆಗಳಲ್ಲಿನ ವಹಿವಾಟು ಶುಲ್ಕಗಳ ಕುರಿತಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸ್ಪಷ್ಟನೆ ನೀಡಿದೆ.
ಐಐಟಿ ಬಾಂಬೆ ನಡೆಸಿದ ಅಧ್ಯಯನದ ಫಲಿತಾಂಶದ ಆಧಾರದ ಮೇಲೆ ಇತ್ತೀಚಿನ ಮಾಧ್ಯಮಗಳ ವರದಿ ಕುರಿತಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟೀಕರಣ ಬಿಡುಗಡೆ ಮಾಡಿದೆ. ಐಐಟಿ ಬಾಂಬೆ ನಡೆಸಿದ ಅಧ್ಯಯನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ದೇಶದ ಹಲವಾರು ಬ್ಯಾಂಕುಗಳು ಶೂನ್ಯ ಬ್ಯಾಲೆನ್ಸ್ ಖಾತೆ ಅಥವಾ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳನ್ನು ಹೊಂದಿರುವವರಿಗೆ ಒದಗಿಸುವ ಕೆಲವು ಸೇವೆಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುತ್ತವೆ ಎನ್ನಲಾಗಿದೆ.
ವರದಿಗಳ ಅನ್ವಯ 2015 ರಿಂದ 20 ರ ಅವಧಿಯಲ್ಲಿ ಎಸ್ಬಿಐ ಸೇವಾ ಶುಲ್ಕ ವಿಧಿಸುವ ಮೂಲಕ 300 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಹೇಳಲಾಗಿತ್ತು.
ಆಗಸ್ಟ್, 2012 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 4 ಉಚಿತ ವಹಿವಾಟುಗಳನ್ನು ಮೀರಿದ ನಂತರ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳಿಗೆ ಬ್ಯಾಂಕ್ ಗಳು ಶುಲ್ಕ ವಿಧಿಸಲು ಮುಕ್ತವಾಗವೆ ಎಂದು ಹೇಳಿದೆ. ಅಂತಹ ಹೆಚ್ಚುವರಿ ಸೇವೆಗಳ ಲಭ್ಯತೆ ಗ್ರಾಹಕರ ಆಯ್ಕೆಯಾಗಿರುತ್ತದೆ ಎಂದು ಹೇಳಲಾಗಿದೆ.
ಎಸ್ಬಿಐ ಗ್ರಾಹಕರಿಗೆ ಪೂರ್ವಭಾವಿ ಮಾಹಿತಿಯೊಂದಿಗೆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳಲ್ಲಿ 4 ಉಚಿತ ವಹಿವಾಟು ಮೀರಿದ ನಂತರ ಡೆಬಿಟ್ ವಹಿವಾಟಿನ ಶುಲ್ಕ ಪರಿಚಯಿಸಿದೆ. 2020 ರ ಆಗಸ್ಟ್ ನಲ್ಲಿ ಡಿಜಿಟಲ್ ಮೋಡ್ ಬಳಸಿ ನಡೆಸುವ ವಹಿವಾಟಿನ ಮೇಲೆ ಜನವರಿ 1, 2020 ರಂದು ಅಥವಾ ನಂತರ ಸಂಗ್ರಹಿಸಿದ ಶುಲ್ಕವನ್ನು ಮರುಪಾವತಿಸುವಂತೆ ಕೇಂದ್ರಿಯ ನೇರ ತೆರಿಗೆ ಮಂಡಳಿ ಬ್ಯಾಂಕುಗಳಿಗೆ ಸೂಚಿಸಿತ್ತು. ಇಂತಹ ವಹಿವಾಟುಗಳ ಮೇಲೆ ಶುಲ್ಕ ವಿಧಿಸದಂತೆ ಹೇಳಲಾಗಿತ್ತು.
ಆರ್.ಬಿ.ಐ.ನ ಈ ನಿರ್ದೇಶನ ಅನುಸರಿಸಿದ ಎಸ್ಬಿಐ ಎಲ್ಲ ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ವಸೂಲಿ ಮಾಡಿದ ಶುಲ್ಕವನ್ನು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆದಾರರಿಗೆ ಹಿಂತಿರುಗಿಸಿದೆ. ಎಸ್‌ಬಿಐ ಎಲ್ಲಾ ಡಿಜಿಟಲ್ ವಹಿವಾಟುಗಳಲ್ಲಿ ಅಂತಹ ಖಾತೆಗಳಲ್ಲಿನ ಶುಲ್ಕವನ್ನು ಮರುಪಡೆಯುವುದನ್ನು ನಿಲ್ಲಿಸಿದೆ.
ಪ್ರಧಾನಮಂತ್ರಿ ಜನಧನ್ ಖಾತೆದಾರರು ಸೇರಿದಂತೆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳಲ್ಲಿನ ಶುಲ್ಕವನ್ನು ಮರು ಪಡೆಯುವುದನ್ನು 2020 ರ ಸೆಪ್ಟೆಂಬರ್ 15 ರಿಂದ ನಗದು ಹಿಂಪಡೆಯುವಿಕೆ ಮೇಲಿನ ಶುಲ್ಕವನ್ನು ತಿಂಗಳಿಗೆ ನಾಲ್ಕು ಸಲ ಉಚಿತವಾಗಿದೆ. ಪ್ರಧಾನಮಂತ್ರಿ ಜನಧನ್ ಯೋಜನೆ ಖಾತೆದಾರರು ಹಾಗೂ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆದಾರರು ಡಿಜಿಟಲ್ ಪಾವತಿ ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಎಸ್ಬಿಐ ಎಲ್ಲಾ ಗ್ರಾಹಕರಿಗೆ ಅನುಕೂಲಕರವಾದ ಬ್ಯಾಂಕಿಂಗ್ ವ್ಯವಸ್ಥೆ, ಸೇವೆ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಂಡಿದೆ. ಎಸ್ಎಂಎಸ್ ಸೇವೆಗಳಿಗೆ ವಿಧಿಸುವ ಶುಲ್ಕವನ್ನು ಎಲ್ಲ ಉಳಿತಾಯ ಖಾತೆದಾರರಿಗೆ ಮಾಸಿಕ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳುವುದರ ಮೇಲೆ ಮನ್ನಾ ಮಾಡಲಾಗಿದೆ ಎಂದು ಹೇಳಲಾಗಿದೆ.