ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಖಾತೆದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದೇಶದ ಅತಿದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ ಜುಲೈ 16 ಮತ್ತು 17 ರಂದು ತಾತ್ಕಾಲಿಕ ನಿರ್ವಹಣೆ ಕಾರಣಕ್ಕೆ ಸುಮಾರು 150 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳಲಿದೆ.
ಈ ನಿರ್ವಹಣೆ ಸ್ಥಗಿತದ ಅವಧಿಯಲ್ಲಿ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯುಪಿಐ ಮತ್ತು ಯೋನೋ ಲೈಟ್ ಸೇರಿದಂತೆ ಎಸ್ಬಿಐ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಎಸ್ಬಿಐನಿಂದ ಟ್ವಿಟರ್ ನಲ್ಲಿ ಮಾಹಿತಿ ನೀಡಲಾಗಿದೆ. ಗ್ರಾಹಕರು ಈ ಮಾಹಿತಿ ಅನುಸರಿಸಿ ತಮ್ಮ ವ್ಯವಹಾರ ವಹಿವಾಟು ನಿಗದಿಪಡಿಸಿಕೊಳ್ಳಲು ತಿಳಿಸಲಾಗಿದೆ.
ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ಈ ಕ್ರಮ ಕೈಗೊಳ್ಳುತ್ತಿರುವುದರಿಂದ ಗ್ರಾಹಕರು ಇದನ್ನು ಸಹಿಸಿಕೊಳ್ಳಬೇಕೆಂದು ವಿನಂತಿಸಲಾಗಿದೆ. ಜುಲೈ 16 ರಂದು 22.45 ಗಂಟೆಯಿಂದ ಮತ್ತು 17 ರಂದು 1.15 ಗಂಟೆಯ ನಡುವೆ (150 ನಿಮಿಷ) ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳಲಿದ್ದು, ಈ ಅವಧಿಯಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ / ಯೋನೊ / ಯೋನೊ ಲೈಟ್ / ಯುಪಿಐ ಸೇವೆಗಳು ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ನಿರ್ವಹಣೆಗಾಗಿ ಎಸ್‌ಬಿಐ ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಜುಲೈ 10 ಮತ್ತು ಜುಲೈ 11 ರಂದು ಬ್ಯಾಂಕಿನ ಡಿಜಿಟಲ್ ಸೇವೆಗಳು ಕೆಲವು ಗಂಟೆಗಳವರೆಗೆ ಲಭ್ಯವಿರಲಿಲ್ಲ.
ಪ್ರಸ್ತುತ, ಎಸ್‌ಬಿಐ ನೆಟ್‌ವರ್ಕ್ ವಿಷಯದಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ ಆಗಿದೆ. ಡಿಸೆಂಬರ್ 31, 2020 ರ ಅಂಕಿಅಂಶಗಳ ಪ್ರಕಾರ ಭಾರತದಾದ್ಯಂತ 22 ಸಾವಿರ ಬ್ಯಾಂಕ್ ಶಾಖೆಗಳನ್ನು, 85 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬ್ಯಾಂಕಿಂಗ್ ಗ್ರಾಹಕರನ್ನು ಹೊಂದಿದೆ.