ಎಸ್‌ಬಿಐ ಖಾತೆದಾರರಿಗೆ ಬ್ಯಾಂಕ್ ಹೊಸ ನಿಯಮ ಜಾರಿಗೆ ತರುತ್ತಿದೆ. ಎಸ್‌ಬಿಐ ಖಾತೆದಾರರು ಎಟಿಎಂ ಮೂಲಕ ಹಣ ತೆಗೆಯಬೇಕು ಎಂದಾದರೆ ಮೊದಲು ಈ ನಿಯಮವನ್ನು ತಿಳಿದುಕೊಂಡರೆ ಉತ್ತಮ. ತನ್ನ ಖಾತೆದಾರರು ಮೋಸಕ್ಕೆ ಒಳಗಾಗಬಾರದು ಎಂಬ ದೃಷ್ಟಿಯಿಂದ ಈ ನಿಯಮ ಜಾರಿಗೆ ತರುತ್ತಿದೆ ಎಸ್‌ಬಿಐ.
ಹೌದು, ಎಟಿಎಂ ಮೂಲಕ ಹಣ ಪಡೆಯುವ ವಿಚಾರದಲ್ಲಿ ಅನೇಕ ಜನ ಮೋಸಕ್ಕೊಳಗಾಗಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿ ಮಾಡುತ್ತಿದೆ ಎಸ್‌ಬಿಐ ಬ್ಯಾಂಕ್. ಇನ್ಮುಂದೆ ಎಟಿಎಂನಲ್ಲಿ 10 ಸಾವಿರ ಅಥವಾ ಅದಕ್ಕಿಂತ ಮೇಲ್ಟಟ್ಟ ಹಣ ವಿತ್‌ಡ್ರಾ ಮಾಡಬೇಕು ಎಂದರೆ ನೀವು ಒಟಿಪಿ ನೀಡಬೇಕಾಗುತ್ತದೆ. ಇನ್ನು ಈ ನಿಯಮ ಸೆಪ್ಟೆಂಬರ್ 18 ರಿಂದ ಜಾರಿಗೆ ಬರಲಿದೆ.
ಎಟಿಎಂನಲ್ಲಿ ಹೋಗಿ ನಿಮ್ಮ ಪಿನ್ ಹಾಕಿದ ನಂತರ 10 ಸಾವಿರ ಅಥವಾ ಅದಕ್ಕಿಂತ ಮೇಲ್ಟಟ್ಟ ಹಣವನ್ನು ನಮೂದಿಸಿದಾಗ ಒಟಿಪಿ ಬರುತ್ತದೆ. ಈ ಒಟಿಪಿ ನಂಬರ್ ನೀಡಿದಾಗ ಮಾತ್ರ ನಿಮಗೆ ಹಣ ಸಿಗುತ್ತದೆ. ಇನ್ನು ನೀವು ನಿಮ್ಮ ಖಾತೆಗೆ ಲಿಂಕ್ ಮಾಡಿದ ಫೋನ್ ನಂಬರ್‌ಗೆ ಮಾತ್ರ ಈ ಒಟಿಪಿ ಬರುತ್ತದೆ. ನೀವೇನಾದರೂ ನಂಬರ್ ಲಿಂಕ್ ಮಾಡಿಸಿಲ್ಲ ಎಂದಾದರೆ ಕೂಡಲೇ ನಿಮ್ಮ ಬ್ಯಾಂಕ್‌ಗೆ ಹೋಗಿ ಲಿಂಕ್ ಮಾಡಿಸುವುದು ಉತ್ತಮ.