ಟರ್ಮ್ ಪ್ಲಾನ್ ಖರೀದಿಸುವುದು ಜನವರಿ 2021 ರಿಂದ ಬಹಳ ಸುಲಭವಾಗಿದೆ. ಹೊಸ ವರ್ಷದಿಂದ ಎಲ್ಲಾ ವಿಮಾ ಕಂಪನಿಗಳು ಸರಳ ಜೀವನ್ ಬಿಮಾವನ್ನು ನೀಡುತ್ತಿವೆ. ಇದರ ಪ್ರಮುಖ ವಿಷಯವೆಂದರೆ ನೀವು ಕಡಿಮೆ ಪ್ರೀಮಿಯಂನಲ್ಲಿಯೂ ಟರ್ಮ್ ಪ್ಲಾನ್ ಖರೀದಿಸಬಹುದು. ಕಡಿಮೆ ಆದಾಯದ ಜನರಿಗೆ ಇದ್ರಿಂದ ಲಾಭವಾಗಲಿದೆ.
ಎಲ್ಲಾ ವಿಮಾ ಕಂಪನಿಗಳ ನಿಯಮಗಳು ಮತ್ತು ಷರತ್ತುಗಳು ಒಂದೇ ಆಗಿರುತ್ತವೆ. ಇದರಲ್ಲಿ ಮೊತ್ತ ಮತ್ತು ಪ್ರೀಮಿಯಂ ಸಹ ಒಂದೇ ಆಗಿರುತ್ತದೆ. ವಿತ್ ಡ್ರಾ ವೇಳೆ ವಿವಾದಗಳಾಗುವುದು ಇದ್ರಿಂದ ಕಡಿಮೆಯಾಗಲಿದೆ.
ಸರಳ ಜೀವನ್ ವಿಮೆ ಪೂರ್ಣಾವಧಿಯ ಜೀವ ವಿಮೆಯಾಗಿದೆ. 18 ರಿಂದ 65 ವರ್ಷದೊಳಗಿನ ಜನರು ಇದನ್ನು ಖರೀದಿಸಲು ಸಾಧ್ಯವಾಗುತ್ತದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಈ ಪಾಲಿಸಿಗಳ ಅವಧಿ 4 ವರ್ಷದಿಂದ 40 ವರ್ಷಗಳವರೆಗೆ ಇರುತ್ತದೆ. ಮಾರ್ಗಸೂಚಿಗಳ ಪ್ರಕಾರ, ಸರಳ ಜೀವನ್ ವಿಮೆಯಲ್ಲಿ 5 ಲಕ್ಷದಿಂದ 25 ಲಕ್ಷದವರೆಗೆ ಪಾಲಿಸಿಯನ್ನು ಖರೀದಿಸಬಹುದು.
ಪಾಲಿಸಿ ನೀಡಿದ 45 ದಿನಗಳೊಳಗೆ ಪಾಲಿಸಿದಾರ ಸಾವನ್ನಪ್ಪಿದ್ರೆ ಇಲ್ಲವೆ ಅಪಘಾತದಲ್ಲಿ ಹಾನಿಯಾದ್ರೆ ವಿಮೆ ಹಣ ಸಿಗುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡಲ್ಲಿ ಕೂಡ ಹಣ ಸಿಗುವುದಿಲ್ಲ. ಮೂರು ರೀತಿಯಲ್ಲಿ ಹಣ ಪಾವತಿಸಬಹುದು. ಸಿಂಗಲ್ ಪ್ರೀಮಿಯಂ, 5-10 ವರ್ಷಗಳ ಸೀಮಿತ ಪ್ರೀಮಿಯಂ ಪಾವತಿ ಅಥವಾ ಸಾಮಾನ್ಯ ಜೀವಿತಾವಧಿಯ ಮಾಸಿಕ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿ ಮಾಡಬಹುದು.