ನವದೆಹಲಿ: ಜುಲೈ 1 ರಿಂದ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಅನೇಕ ಬದಲಾವಣೆಗೆ ಕಾರಣವಾಗುವ ನಿಯಮಗಳು ಜಾರಿಗೆ ಬರಲಿವೆ.
ಆಧಾರ್ –ಪಾನ್ ಲಿಂಕ್:
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ವಿಳಂಬಕ್ಕೆ ವಿಧಿಸುತ್ತಿದ್ದ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಆಧಾರ್ -ಪಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31, 2023 ರವರೆಗೆ ಅವಕಾಶ ಇದ್ದು, ಇಂದಿನಿಂದ ದಂಡದ ಮೊತ್ತ 500 ಬದಲು ಒಂದು ಸಾವಿರ ರೂಪಾಯಿ ಆಗಲಿದೆ.
ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ:
ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಇಂದಿನಿಂದ ಜಾರಿಗೆ ಬಂದಿದೆ. ಒಮ್ಮೆ ಬಳಸುವ ತೆಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ, ಆಮದು, ಮಾರಾಟ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರಿಗೆ 5 ವರ್ಷದವರೆಗೆ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು.
ಬಿಟ್ ಕಾಯಿನ್ ತೆರಿಗೆ:
ಜುಲೈ ಒಂದರಿಂದ ಬಿಟ್ ಕಾಯಿನ್ ರೀತಿ ಕ್ರಿಪ್ಟೋ ಕರೆನ್ಸಿಗೆ ಟಿಡಿಎಸ್ ವಿಧಿಸಲಾಗುವುದು. ಬಿಟ್ ಕಾಯಿನ್ ನಂತಹ ಕ್ರಿಪ್ಟೋ ಕರೆನ್ಸಿ ಖರೀದಿಗೆ ಪಾವತಿಸುವ 10,000 ರೂ. ಮೇಲ್ಪಟ್ಟ ಹಣಕ್ಕೆ ಶೇಕಡ ಒಂದರಷ್ಟು ಟಿಡಿಎಸ್ ವಿಧಿಸಲಾಗುವುದು. ಇದು ಈಗಿರುವ ಶೇಕಡ 30ರಷ್ಟು ತೆರಿಗೆ ಹೊರತಾಗಿರುತ್ತೆ.
ಸ್ಯಾಂಪಲ್ ಔಷಧಕ್ಕೆ ತೆರಿಗೆ:
ವೈದ್ಯರ ಸ್ಯಾಂಪಲ್ ಔಷಧಕ್ಕೂ ತೆರಿಗೆ ವಿಧಿಸಲಾಗುತ್ತದೆ. ಐಟಿ ಕಾಯ್ದೆ ಹೊಸ ನಿಯಮದ ಪ್ರಕಾರ, ವೈದ್ಯರು ಫಾರ್ಮಾ ಕಂಪನಿಗಳಿಂದ ವರ್ಷಕ್ಕೆ 20000 ರೂ.ಗಿಂತ ಹೆಚ್ಚಿನ ಉಚಿತ ಸ್ಯಾಂಪಲ್ ಪಡೆದರೆ ತೆರಿಗೆ ಪಾವತಿಸಬೇಕಿದೆ.
ಜಾಲತಾಣ ಪ್ರಭಾವಿಗಳಿಗೆ ಟ್ಯಾಕ್ಸ್:
ಇಂದಿನಿಂದ ಸಾಮಾಜಿಕ ಜಾಲತಾಣ ಪ್ರಭಾವಿಗಳಿಗೆ ಟಿಡಿಎಸ್ ಕಡಿತವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇನ್ಫ್ಲುಯೆನ್ಸ್ ರ್ ಗಳಾಗಿ ಕೆಲಸ ಮಾಡಿ ವರ್ಷಕ್ಕೆ 20 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಗಳಿಸಿದರೆ ಶೇಕಡ 10 ರಷ್ಟು ಟಿಡಿಎಸ್ ಕಡಿತವಾಗಲಿದೆ.
ಗಳಿಕೆ ರಜೆ:
ಜುಲೈ 1ರಿಂದ ಹೊಸ ಕಾರ್ಮಿಕ ನೀತಿ ಅನ್ವಯ ಹಿಂದಿನ ವರ್ಷಗಳ ರಜೆಯನ್ನು ಸೇರಿಸಿಕೊಳ್ಳುತ್ತ ಒಟ್ಟು 300 ರಜೆಗಳನ್ನು ಗಳಿಕೆ ರಜೆಗಳನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ.
ಪಿಎಫ್ ಪಾಲು ಹೆಚ್ಚಳ:
ಜುಲೈ 1ರಿಂದ ಪಿಎಫ್ ಪಾಲು ಹೆಚ್ಚಾಗಲಿದೆ. ನೌಕರರ ಮೂಲವೇತನವು ಅವರ ಒಟ್ಟು ವೇತನದ ಕನಿಷ್ಠ ಶೇಕಡ 50ರಷ್ಟು ಇರಲೇಬೇಕು. ನೌಕರರು ಹಾಗೂ ಕಂಪನಿಗಳು ಪಾವತಿಸುವ ಭವಿಷ್ಯ ನಿಧಿ ಪಾಲು ಹೆಚ್ಚಾಗಲಿದೆ. ಟೇಕ್ ಹೋಂ ಸ್ಯಾಲರಿ ಕಡಿಮೆಯಾಗಲಿದೆ.