ಬ್ಯಾಂಕ್ ನೌಕರರ ವೇತನವನ್ನು ಶೇಕಡ 15 ರಷ್ಟು ಹೆಚ್ಚಳ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತೀಯ ಬ್ಯಾಂಕ್ ಗಳ ಸಂಘ(IBA), ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್(UFBU) ವತಿಯಿಂದ ಬ್ಯಾಂಕ್ ಉದ್ಯೋಗಿಗಳಿಗೆ ಶೇಕಡ 15 ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಂದ ಮಾಡಿಕೊಂಡಿವೆ ಎಂದು ಒಕ್ಕೂಟದ ಮುಖಂಡರು ಹೇಳಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ(AIBEA) ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ ಈ ಕುರಿತು ಮಾಹಿತಿ ನೀಡಿ, ಮುಂಬೈನಲ್ಲಿ ನಡೆದ ಐಬಿಎ ಮತ್ತು ಯುಎಫ್‌ಬಿಯು ನಡುವಿನ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 10 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿರುವ ವೇತನ ಪರಿಷ್ಕರಣೆ ನವೆಂಬರ್ 1, 2017 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ವಾರ್ಷಿಕ ವೇತನ ಭತ್ಯೆಗಳನ್ನು ಹೆಚ್ಚಳ ಮಾಡಲು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸಾರ್ವಜನಿಕ, ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು ಸೇರಿದಂತೆ 37 ಬ್ಯಾಂಕುಗಳಿಗೆ ಉದ್ಯೋಗಿಗಳ ವೇತನ ಹೆಚ್ಚಳ ನಿರ್ಧರಿಸಲು ಐಬಿಎಗೆ ಆದೇಶ ನೀಡಲಾಗಿದೆ. ನೌಕರರು ಮತ್ತು ಅಧಿಕಾರಿಗಳ ನಡುವಿನ ವಾರ್ಷಿಕ ವೇತನ ಹೆಚ್ಚಳದ ವಿತರಣೆಯನ್ನು ಪ್ರತ್ಯೇಕವಾಗಿ ಮಾಡಲಾಗುವುದು.
ಹಬ್ಬಗಳ ಸಂದರ್ಭದಲ್ಲಿ ಪ್ರತಿ ವರ್ಷ 7 ದಿನ ರಜೆ, 5 ದಿನಗಳ ರಜೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬ್ಯಾಂಕಿನ ಕೊಡುಗೆಯನ್ನು ಶೇಕಡ 10 ರಿಂದ 14 ಕ್ಕೆ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.