ಮುಂಬೈ: ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಉದ್ಯಮ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್.ಎ.ಐ.ಎಲ್.) ತನ್ನ ಉದ್ಯೋಗಿಗಳಿಗೆ ಅತಿ ಅಪರೂಪದ ಕಡಿಮೆ ಅವಧಿಯ ಕೆಲಸದ ಯೋಜನೆ ಜಾರಿಗೊಳಿಸಿದೆ. ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಲು ಅನುಕೂಲವಾಗುವ ಈ ಯೋಜನೆಗಳು ನವೆಂಬರ್ 1 ರಿಂದ ಜಾರಿಯಾಗಿವೆ.
ಕಂಪನಿಯ ಕಾಯಂ ಮಧ್ಯಮ ಶ್ರೇಣಿಯ ನೌಕರರವರೆಗೆ ಈ ಸೌಲಭ್ಯ ದೊರೆಯಲಿದೆ. ಹೊಸ ಯೋಜನೆಯ ಪ್ರಕಾರ, ವೆರಿಯೆಬಲ್ ಪೇ ಸ್ವರೂಪದಲ್ಲಿ ಉದ್ಯೋಗಿಗಳು ವಾರದಲ್ಲಿ ಮೂರು ದಿನ, ದಿನ ಬಿಟ್ಟು ದಿನ, ಪ್ರತಿ ದಿನದ ನಾಲ್ಕು ತಾಸು ಅಥವಾ ಪ್ರತಿ ತಿಂಗಳಲ್ಲಿ ಅರ್ಧ ದಿನಗಳು ಹೀಗೆ ಯಾವ ಸ್ವರೂಪದ ಕೆಲಸವನ್ನು ಬೇಕಾದರೂ ಆಯ್ದುಕೊಳ್ಳಬಹುದು. ಹೊಸ ಸ್ವರೂಪದ ಕೆಲಸದ ಯೋಜನೆ ಆಯ್ದುಕೊಂಡವರಿಗೆ ಎಚ್.ಆರ್.ಎ., ವಸತಿ ಹಾಗೂ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಲಿವೆ.
“ಎಸ್.ಎ.ಐ.ಎಲ್. ಯಾವಾಗಲೂ ಉದ್ಯೋಗಿ ಸ್ನೇಹಿಯಾಗಿದೆ. ಹೊಸ ಹಾಗೂ ಸ್ಮಾರ್ಟ್ ಉದ್ಯೋಗ ಶೈಲಿ ರೂಪಿಸುವಲ್ಲಿ ಮೊದಲಿಗನಾಗಿದೆ” ಎಂದು ಕಂಪನಿಯ ಅಧ್ಯಕ್ಷ ಅನಿಲ ಕುಮಾರ್ ಹೇಳಿದ್ದಾರೆ.