ನವದೆಹಲಿ: ಜಗತಿಕವಾಗಿ ರಸಗೊಬ್ಬರ ದರ ಏರುಗತಿಯಲ್ಲಿದ್ದು, ದೇಶಿಯವಾಗಿಯೂ ರಸಗೊಬ್ಬರ ದರ ದುಬಾರಿಯಾಗುವ ಸಾಧ್ಯತೆ ಇದೆ. ರಷ್ಯಾದ ರಸಗೊಬ್ಬರ ಕಂಪನಿಗಳು ಭಾರತಕ್ಕೆ ಇದುವರೆಗೆ ನೀಡುತ್ತಿದ್ದ ರಿಯಾಯಿತಿ ರದ್ದುಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ವ್ಯತ್ಯಯದ ಕಾರಣ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ರಷ್ಯಾ ರಸಗೊಬ್ಬರ ಕಂಪನಿಗಳು ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ನೀಡುತ್ತಿದ್ದ ರಿಯಾಯಿತಿ ಹಿಂಪಡೆದುಕೊಂಡಿದ್ದು, ಮಾರುಕಟ್ಟೆ ದರದಲ್ಲಿ ಗೊಬ್ಬರ ಖರೀದಿಸುವುದರಿಂದ ಭಾರತಕ್ಕೆ ಆಮದು ವೆಚ್ಚ ಭಾರಿ ಹೆಚ್ಚಳ ಆಗಲಿದೆ.
2202- 23ನೇ ಆರ್ಥಿಕ ವರ್ಷದಲ್ಲಿ ರಷ್ಯಾದಿಂದ ಭಾರತಕ್ಕೆ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣ ಶೇಕಡ 246ರಷ್ಟು ಹೆಚ್ಚಳ ಆಗಿತ್ತು. ಡಿಎಪಿ, ಯೂರಿಯಾ, ಎನ್.ಪಿ.ಕೆ. ಗೊಬ್ಬರಗಳ ಮೇಲೆ ರಷ್ಯಾ ಮಾರಾಟ ಸಂಸ್ಥೆಗಳು ರಿಯಾಯಿತಿ ಘೋಷಣೆ ಮಾಡಿ ಜಾಗತಿಕ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಭಾರತಕ್ಕೆ ರಸಗೊಬ್ಬರ ನೀಡಿದ್ದವು. ಈ ಮೂಲಕ ಭಾರತದ ರಸಗೊಬ್ಬರ ಮಾರುಕಟ್ಟೆಯಲ್ಲಿನ ಚೀನಾ, ಜೋರ್ಡನ್, ಈಜಿಫ್ಟ್, ಯುಎಇ ಗೊಬ್ಬರ ಸಂಸ್ಥೆಗಳ ಪಾಲನ್ನು ರಷ್ಯಾ ಆಕ್ರಮಿಸಿಕೊಂಡಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಏರು ಗತಿಯಲ್ಲಿ ಸಾಗಿದ್ದು, ರಷ್ಯಾ ಕಂಪೆನಿಗಳು ರಿಯಾಯಿತಿ ಹಿಂಪಡೆಯುವುದರಿಂದ ಭಾರತದಲ್ಲಿ ರಸಗೊಬ್ಬರ ಬೆಲೆ ಹೆಚ್ಚಾಗಲಿದೆ. ಬೆಲೆ ಏರಿಕೆಯ ಹೊರೆ ರೈತರ ಮೇಲೆ ಬೀಳದಂತೆ ತಡೆಯಲು ಸಬ್ಸಿಡಿ ಘೋಷಿಸುವುದು ಸರ್ಕಾರದ ಮುಂದಿರುವ ಆಯ್ಕೆಯಾಗಿದೆ ಎಂದು ಹೇಳಲಾಗಿದೆ.