ನವದೆಹಲಿ: ದೇಶದ ಎಲ್ಲಾ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಜಾಲ ನಿರ್ಮಿಸಿ ಇಂಟರ್ನೆಟ್ ವೇಗ ಹೆಚ್ಚಿಸಲು ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಗ್ರಾಮಗಳಿಗೆ OFC ಸಂಪರ್ಕ ಜಾಲ ನಿರ್ಮಿಸಿ ಇಂಟರ್ನೆಟ್ ವೇಗ ಹೆಚ್ಚಿಸಲು ಭಾರತ ಯೋಜನೆಯಡಿ ಇನ್ನಷ್ಟು ಸ್ಥಳಗಳನ್ನು ಆಯ್ಕೆ ಮಾಡಲಾಗುವುದು. ಈ ಮೂಲಕ ಗ್ರಾಮೀಣ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರಲಾಗುತ್ತದೆ. ಮುಖ್ಯವಾಹಿನಿಯ ಸಂಪರ್ಕದಿಂದ ವಂಚಿತವಾದ ಗುಡ್ಡಗಾಡು ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಗ್ರಾಮಾಂತರ ಭಾಗದ ಎಂಎಸ್ಎಂಇ ಗಳ ಪರಿಸ್ಥಿತಿ ಸುಧಾರಣೆಯ ಗುರಿಯನ್ನು ಹೊಂದಲಾಗಿದೆ.
ಅದೇ ರೀತಿ ರೈತರು, ಗ್ರಾಮೀಣರಿಗೆ ನೆರವಾಗುವ ನಿಟ್ಟಿನಲ್ಲಿ ಸಹಕಾರಿ ಸೊಸೈಟಿಗಳ ಮೇಲಿನ ತೆರಿಗೆಯನ್ನು ಶೇಕಡ 18.5 ಶೇಕಡ 15 ಕ್ಕೆ ಇಳಿಕೆ ಮಾಡಲಾಗಿದೆ. ಸಹಕಾರ ಸಂಘಗಳ 10 ಕೋಟಿ ರೂಪಾಯಿವರೆಗಿನ ಆದಾಯಕ್ಕೆ ಮೇಲ್ತೆರಿಗೆಯನ್ನು ಶೇಕಡ 12 ರಿಂದ ಶೇಕಡ 7 ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಸಹಕಾರಿ ಸಂಘಗಳಲ್ಲಿ ಹೆಚ್ಚಿನ ಸದಸ್ಯರಾಗಿರುವ ಗ್ರಾಮೀಣ ಜನರು ಮತ್ತು ಕೃಷಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಕೃಷಿಯಲ್ಲಿ ಡ್ರೋನ್ ಗಳ ಬಳಕೆ, ರಾಸಾಯನಿಕ ಮುಕ್ತ ಸಹಜ ಕೃಷಿ ಪದ್ಧತಿ, ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಸ್ಥಾಪಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮೂಲಕ ಭತ್ತ, ಗೋಧಿ ಖರೀದಿಸಲು 2.37 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಎಂ.ಎಸ್.ಪಿ. ಮೂಲಕ ರೈತರಿಂದ ಬೆಳೆ ಖರೀದಿಸಿ ಅವರಿಗೆ ಪ್ರತಿಯಾಗಿ ರೈತರ ಖಾತೆಗಳಿಗೆ ನೇರವಾಗಿ ಅನುದಾನ ಜಮಾ ಮಾಡಲಾಗುತ್ತದೆ. ಕೃಷಿಯಲ್ಲಿ ಕಿಸಾನ್ ಡ್ರೋನ್ ಗಳ ಬಳಕೆಗೆ ಉತ್ತೇಜನ ನೀಡುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದ್ದು, ಬೆಳೆ ಮೌಲ್ಯಮಾಪನ, ಭೂದಾಖಲೆ ಡಿಜಿಟಲೀಕರಣ, ಕೀಟನಾಶಕಗಳ ಸಿಂಪಡಣೆ ಕೃಷಿ ಡ್ರೋಣ್ ಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ.
ಆಹಾರ ಉತ್ಪಾದನೆ ಸರಪಳಿ ಮೌಲ್ಯವರ್ಧನೆ ಉದ್ದೇಶದಿಂದ ಕೃಷಿ ಸ್ಟಾರ್ಟಪ್ ಮತ್ತು ಗ್ರಾಮೀಣ ಕೃಷಿ ಉದ್ಯಮಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಎಣ್ಣೆಕಾಳು ಉತ್ಪಾದನೆಗೆ ಉತ್ತೇಜನ, ಸಹಜ ಕೃಷಿಗೆ ಉತ್ತೇಜನ ನೀಡುವುದಾಗಿ ಘೋಷಿಸಲಾಗಿದೆ.