ನವದೆಹಲಿ: ಡಿಸೆಂಬರ್ 1 ರಿಂದ ದೇಶಾದ್ಯಂತ ಅನೇಕ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು, ಇವು ಅನೇಕರ ಜೀವನದ ಮೇಲೆ ಪರಿಣಾಮ ಬೀರಲಿವೆ.
ಸಿಲಿಂಡರ್ ದರ ಇಳಿಕೆ ಸಾಧ್ಯತೆ:
ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರ ಪರಿಷ್ಕರಣೆ ಮಾಡಲಿದ್ದು, ಜಾಗತಿಕ ಮಾರುಕಟ್ಟೆಯ ಬೆಳವಣಿಗೆ ಆಧರಿಸಿ ಸಿಲಿಂಡರ್ ದರ ಏರಿಳಿತವಾಗುತ್ತದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡುವ ಮೂಲಕ ಜನರಿಗೆ ಕೊಂಚ ಹೊರೆ ಕಡಿಮೆ ಮಾಡಲಾಗಿದೆ. ಡಿಸೆಂಬರ್ 1 ರಂದು ಈಗಾಗಲೇ ಬಾರಿ ದುಬಾರಿಯಾಗಿರುವ ಅಡುಗೆ ಅನಿಲ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಕಿಪೊಟ್ಟಣ 2 ರೂ.:
ಇನ್ನು ಬೆಂಕಿಪಟ್ಟಣ ಬೆಲೆ ಡಿಸೆಂಬರ್ 1 ರಿಂದ ಹೆಚ್ಚಾಗಲಿದೆ. 14 ವರ್ಷಗಳ ನಂತರ ಬೆಂಕಿಪೊಟ್ಟಣ ದರ ಪರಿಷ್ಕರಣೆ ಮಾಡಲಾಗಿದ್ದು, ಡಿಸೆಂಬರ್ 1 ರಿಂದ ಒಂದು ಬೆಂಕಿ ಪೊಟ್ಟಣ ದರ ಒಂದು ರೂಪಾಯಿಂದ ಎರಡು ರೂಪಾಯಿಗೆ ಏರಿಕೆಯಾಗಲಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಾದ ಕಾರಣ ಬೆಂಕಿಪೊಟ್ಟಣ ದರ ಹೆಚ್ಚಾಗಲಿದೆ.
ಉಳಿತಾಯ ಬಡ್ಡಿ ಇಳಿಕೆ:
ಡಿಸೆಂಬರ್ 1 ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಬಡ್ಡಿ ದರ ಇಳಿಕೆಯಾಗಲಿದೆ. ಪ್ರಸ್ತುತ ಶೇಕಡ 2.90 ಬಡ್ಡಿದರ ಇದ್ದು, ಇದನ್ನು ಶೇಕಡ 2.80 ರಷ್ಟು ಇಳಿಕೆ ಮಾಡಲಾಗುವುದು.
ಕ್ರೆಡಿಟ್ ಕಾರ್ಡ್ ಶುಲ್ಕ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಡಿಸೆಂಬರ್ 1 ರಿಂದ ಶುಲ್ಕ ವಿಧಿಸಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಮೂಲಕ ವಸ್ತುಗಳನ್ನು ಖರೀದಿ ಮಾಡಿದಾಗ ಪ್ರಸ್ತುತ ಇರುವ ಬಡ್ಡಿಯ ಜೊತೆಗೆ ಸಂಸ್ಕರಣೆ ಶುಲ್ಕವನ್ನು ಕೂಡ ಪಾವತಿಸಬೇಕಿದೆ. EMI ಯೋಜನೆಯಡಿ ಪ್ರತಿ ಖರೀದಿಗೆ 99 ರೂ. ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕು.
ಪಿಎಫ್ ಖಾತೆಗೆ ಆಧಾರ್ ಲಿಂಕ್:
ಇನ್ನು ಡಿಸೆಂಬರ್ 1 ರಿಂದ ಜಾರಿಯಾಗಲಿರುವ ಹೊಸ ನಿಯಮದ ಅನ್ವಯ ನವೆಂಬರ್ 30 ರೊಳಗೆ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಬೇಕಿದೆ. ಇಲ್ಲದಿದ್ದರೆ ಡಿಸೆಂಬರ್ 1 ರ ನಂತರ ಅವರ ಪಿಎಫ್ ಮೊತ್ತ ಖಾತೆಗೆ ಜಮಾ ಆಗುವುದಿಲ್ಲ ಎನ್ನಲಾಗಿದೆ.
ಗೃಹಸಾಲ:
ಡಿಸೆಂಬರ್ 1 ರಿಂದ ಗೃಹಸಾಲ ಪಡೆಯುವ ಗ್ರಾಹಕರು ಹೆಚ್ಚಿನ ಬಡ್ಡಿ ಪಾವತಿಸಬೇಕಿದೆ. ಬಡ್ಡಿ ಕಡಿತ ಸೇರಿ ಹಲವು ಗೃಹ ಸಾಲದ ಮೇಲೆ ಕೊಡುಗೆ ನೀಡಿದ್ದ ಬ್ಯಾಂಕ್ ಗಳು ನವೆಂಬರ್ 30 ರ ನಂತರ ಆಫರ್ ನಿಲ್ಲಿಸಲಿವೆ.