ನವದೆಹಲಿ: ಕಳೆದ ಎರಡು ವರ್ಷದಲ್ಲಿ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಲಿಖಿತ ಉತ್ತರ ನೀಡಿ, 2000 ರೂಪಾಯಿ ಮುಖಬೆಲೆಯ ನೋಟು ಮುದ್ರಿಸಿಲ್ಲ ಎಂದು ತಿಳಿಸಿದ್ದಾರೆ. ಫೆಬ್ರವರಿ 26, 2021 ರ ಹೊತ್ತಿಗೆ 2499 ಮಿಲಿಯನ್ 2000 ರೂ. ನೋಟುಗಳು ಚಲಾವಣೆಯಲ್ಲಿವೆ. ನಿರ್ದಿಷ್ಟ ನೋಟುಗಳ ಮುದ್ರಣವನ್ನು ಆರ್ಬಿಐ ನೊಂದಿಗೆ ಸಮಾಲೋಚನೆ ನಡೆಸಿ ಮುದ್ರಿಸಲಾಗುವುದು ಎಂದು ಹೇಳಿದ್ದಾರೆ.
ಏಪ್ರಿಲ್, 2019 ರಿಂದ 2000 ರೂ. ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ. ಹೆಚ್ಚಿನ ಮೌಲ್ಯದ ಕರೆನ್ಸಿ ಸಂಗ್ರಹಿಸುವುದನ್ನು ತಡೆಯುವ, ಕಪ್ಪು ಹಣ ಮತ್ತು ನಕಲಿ ನೋಟು ತಡೆ ಉದ್ದೇಶದಿಂದ 2016 ರ ನವೆಂಬರ್ ನಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದು 2000 ರೂ. ಸೇರಿದಂತೆ ಹಲವು ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಗಿತ್ತು. 500 ರೂಪಾಯಿ ನೋಟು ಚಲಾವಣೆಯಲ್ಲಿದೆ. 1000 ರೂಪಾಯಿ ನೋಟು ಸ್ಥಗಿತವಾಗಿದೆ. ನೋಟ್ ಬ್ಯಾನ್ ಬಳಿಕ ಬಂದಿದ್ದ 2000 ರೂ. ನೋಟು ಮುದ್ರಣ ಕಳೆದ 2 ವರ್ಷಗಳಿಂದ ನಿಂತಿದೆ ಎನ್ನಲಾಗಿದೆ.