ಗುರಿ ಸಾಧಿಸಲು ಕನಸು ಕಾಣಿ. ನೀವು ಕನಸು ಕಾಣದೆ ಹೋದ್ರೆ ಜೀವನದಲ್ಲಿ ಯಾವುದೇ ಗುರಿಯಿರಲು ಸಾಧ್ಯವಿಲ್ಲ. ಗುರಿಯಿಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ಮಾತನ್ನು ಖ್ಯಾತ ಉದ್ಯಮಿ ಮತ್ತು ಎಚ್‌ಸಿಎಲ್ ಟೆಕ್ ಸಂಸ್ಥಾಪಕ ಶಿವ ನಾಡರ್ ಹೇಳಿದ್ದರು. ಸದ್ಯ ಶಿವ ನಾಡರ್ ಸುದ್ದಿಯಲ್ಲಿದ್ದಾರೆ. ನಾಡರ್, ಕಂಪನಿಯ ಅಧ್ಯಕ್ಷ ಹುದ್ದೆಯನ್ನು ತೊರೆದಿದ್ದಾರೆ.
ಈಗ ಅವರ ಮಗಳು ರೋಶ್ನಿ ನಾಡರ್ ಮಲ್ಹೋತ್ರಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವ ನಾಡರ್ ಮುಂದುವರಿಯಲಿದ್ದಾರೆ. ಶುಕ್ರವಾರ ಜೂನ್ ತ್ರೈಮಾಸಿಕದ ವರದಿ ಘೋಷಣೆ ಮಾಡಿದ ನಂತ್ರ ಶಿವ ನಾಡರ್ ಈ ಘೋಷಣೆ ಮಾಡಿದ್ರು.
ರೋಶ್ನಿ, ಶಿವ ನಾಡರ್ ಅವ್ರ ಒಬ್ಬಳೆ ಮಗಳು. ಆರಂಭದ ಅಭ್ಯಾಸವನ್ನು ದೆಹಲಿಯಲ್ಲಿ ಮಾಡಿದ ರೋಶ್ನಿ, ಪದವಿ ಪಡೆಯಲು ಅಮೆರಿಕಾಕ್ಕೆ ತೆರಳಿದ್ದರು. ನಂತ್ರ ಸಿಎನ್ಬಿಸಿ ನ್ಯೂಸ್ ಚಾನೆಲ್ ನಲ್ಲಿ ಇಂಟರ್ನ್ ಮಾಡಿದ್ದರು. ಸ್ಕೈನ್ಯೂಸ್ ನಲ್ಲಿಯೂ ಕೆಲ ದಿನ ಕೆಲಸ ಮಾಡಿದ್ದರು. ನಂತ್ರ ತಂದೆ ಕರೆ ಮೇರೆಗೆ ಭಾರತಕ್ಕೆ ಬಂದಿದ್ದರು.
ರೋಶ್ನಿ 2009ರಲ್ಲಿ ಎಚ್.ಸಿ.ಎಲ್. ನ ಸಿಇಒ ಹುದ್ದೆ ಅಲಂಕರಿಸಿದ್ದರು. ಆಗ ಅವ್ರ ವಯಸ್ಸು ಕೇವಲ 27 ವರ್ಷ. ಒಂದೇ ವರ್ಷದಲ್ಲಿ ರೋಶ್ನಿ ಕಾರ್ಯನಿರ್ವಾಹಕ ನಿರ್ದೇಶಕರಾದ್ರು. ಅಧ್ಯಕ್ಷ ಹುದ್ದೆ ಸ್ವೀಕರಿಸದೆ ಹೋದ್ರೂ ಈವರೆಗೂ ಅವ್ರ ಅನುಮತಿಯಿಲ್ಲದೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗ್ತಿರಲಿಲ್ಲ.
2010ರಲ್ಲಿ ಶೇಖರ್ ಮಲ್ಹೋತ್ರಾರನ್ನು ರೋಶ್ನಿ ಮದುವೆಯಾಗಿದ್ದಾರೆ. ಈ ವೇಳೆ ಎಚ್.ಸಿ.ಎಲ್. ನಲ್ಲಿಯೇ ಮಲ್ಹೋತ್ರಾ ಕೆಲಸ ಮಾಡ್ತಿದ್ದರು. ಈಗ್ಲೂ ಮಲ್ಹೋತ್ರಾ ಪತ್ನಿ ಜೊತೆ ಕಂಪನಿ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.