ನವದೆಹಲಿ: ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಶೇಕಡ 25 ರಿಂದ 15.25 ಕ್ಕೆ ಕಡಿತಗೊಳಿಸಿರುವುದರಿಂದ ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿಯ ಬೆಲೆಗಳು ಶೇಕಡ 5 ರಷ್ಟು ಹೆಚ್ಚಾಗಿದೆ. ಆಮದು ಸುಂಕ ಕಡಿತವು ಬಾಂಗ್ಲಾದೇಶದಿಂದ ಅಕ್ಕಿ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಬಾಂಗ್ಲಾದೇಶ ಸರ್ಕಾರ ಅಕ್ಕಿ ಆಮದಿನ ಮೇಲಿನ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ನಂತರ ಬೆಲೆಗಳು ಹಠಾತ್ತನೆ ಶೇಕಡ 4 ರಷ್ಟು ಏರಿಕೆಯಾಗಿದೆ. ನೆರೆಯ ರಾಷ್ಟ್ರ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದ ಅಕ್ಕಿಯನ್ನು ಖರೀದಿಸುತ್ತದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಅಕ್ಕಿಯನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗುತ್ತದೆ, ಸಾಂಬಾ ಮನ್ಸೂರಿ, ಸೋನಂ ಮತ್ತು ಕೋಲಂ ತಳಿಯ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ. ಕಳೆದ ಒಂದು ವಾರದಲ್ಲಿ ಈ ತಳಿಗಳ ಬೆಲೆಗಳು ಈಗಾಗಲೇ 3-4 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳವು ಬಾಂಗ್ಲಾದೇಶಕ್ಕೆ ಹತ್ತಿರವಾಗಿರುವುದರಿಂದ, ಬಾಂಗ್ಲಾ ಮಿನಿಕೇಟ್ ಅಕ್ಕಿಯನ್ನು ಖರೀದಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ಮಿನಿಕೇಟ್ ತಳಿಯ ಬೆಲೆಗಳು ಶೇಕಡ 5 ರಷ್ಟು ಏರಿಕೆಯಾಗಿದೆ. ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ಭಾರತವು 40 ಪ್ರತಿಶತವನ್ನು ಹೊಂದಿದೆ. ಹೆಚ್ಚಿನ ಬೇಡಿಕೆಯ ಹೊರತಾಗಿ, ಈ ವರ್ಷ ಭತ್ತದ ಕೃಷಿಯೂ ಕಡಿಮೆಯಾಗಿದೆ, ಇದು ಅಕ್ಕಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಗೋಧಿ ಬೆಲೆಯೂ ಜಿಗಿತ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಏರಿಕೆ ಕಂಡಿದ್ದು, ದೇಶದ ಜನರ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿ ಮೇ 2022 ರಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿಗೆ ಹೆಚ್ಚಿದ ಬೇಡಿಕೆಯು ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಗಮನಾರ್ಹ ಬೆಲೆ ಏರಿಕೆಗೆ ಕಾರಣವಾಯಿತು. ದೇಶೀಯ ಬೆಲೆಗಳನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಇತ್ತೀಚೆಗೆ ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ವಿನಾಯಿತಿ ನೀತಿಯನ್ನು ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಅನುಮೋದಿಸಿದೆ. ಈ ಕ್ರಮವು ಈಗ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಲು ಅನುವು ಮಾಡಿಕೊಡುತ್ತದೆ, ಇದು ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಗೆ ಕಡಿವಾಣ ಹಾಕಲಿದೆ.