
ಬೆಂಗಳೂರು: ಮಳೆ ಕೊರತೆಯಿಂದ ಭತ್ತ ಇಳುವರಿ ಕುಸಿತವಾಗಿ ದಾಸ್ತಾನು ಹೆಚ್ಚಳ ಮಾಡಲಾಗುತ್ತಿದೆ. ಇದರಿಂದಾಗಿ ಎಲ್ಲೆಡೆ ಅಕ್ಕಿ ದರ ದುಬಾರಿಯಾಗಿದೆ.
ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿ ಭತ್ತದ ದಾಸ್ತಾನು ಪ್ರಮಾಣ ಹೆಚ್ಚಾಗಿದ್ದು, ರಾಜ್ಯದ ಬಹುತೇಕ ಚಿಲ್ಲರೆ ಮಾರುಕಟ್ಟೆಗಳಲ್ಲಿ ಅಕ್ಕಿಯ ದರ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕೆಲವು ಚಿಲ್ಲರೆ ಮಾರುಕಟ್ಟೆಗಳಲ್ಲಿ ಅಕ್ಕಿದ ದರ ಕೆಜಿಗೆ 20 ರೂಪಾಯಿವರೆಗೆ ಏರಿಕೆಯಾಗಿದೆ.
ಊಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಸೋನಾ ಮಸೂರಿ ಅಕ್ಕಿ ದರ ಕೋಲಾರದಲ್ಲಿ 15ರೂ., ತುಮಕೂರಿನಲ್ಲಿ 10 ರೂ.ಪಾಯಿವರೆಗೆ ಹೆಚ್ಚಳ ಆಗಿದೆ. ಮಲೆನಾಡಿನಲ್ಲಿಯೂ ಅಕ್ಕಿ ದರ ಹೆಚ್ಚಳವಾಗಿದೆ. ಭತ್ತ ಪೂರೈಕೆ ಇಲ್ಲದ ಕಾರಣ ರೈಸ್ ಮಿಲ್ ಗಳಲ್ಲಿ ಕೆಲಸದ ದಿನ ಕಡಿತ ಮಾಡಲಾಗಿದೆ.
ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಕುಚಲಕ್ಕಿ ದರ 3 ತಿಂಗಳಲ್ಲಿ ಕೆಜಿಗೆ ಸರಾಸರಿ 10 ರೂಪಾಯಿ ಹೆಚ್ಚಳವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕುಚಲಕ್ಕಿ ದರ 2 ತಿಂಗಳಲ್ಲಿ ಶೇಕಡ 25ರಷ್ಟು ಹೆಚ್ಚಳ ಆಗಿದೆ. ಸೋನಾಮಸೂರಿ ಅಕ್ಕಿ ದರವೂ ಭಾರಿ ಹೆಚ್ಚಾಗಿದ್ದು, ಕೆಜಿಗೆ 48 ರಿಂದ 62 ರೂ.ಗೆ ಏರಿಕೆ ಆಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ದಿನ ಬಳಕೆಯ ಪ್ರಮುಖ ಆಹಾರ ಧಾನ್ಯ ಅಕ್ಕಿ ದರ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ.