ಶಿವಮೊಗ್ಗ: ಭವಿಷ್ಯನಿಧಿ ಸದಸ್ಯರು ಪಿಂಚಣಿ ಪಡೆಯಲು ಕಾಯುವ ಅಗತ್ಯವಿಲ್ಲ. ನಿವೃತ್ತಿ ದಿನವೇ ಪಿಂಚಣಿ ಆದೇಶ ಕೈಸೇರಲಿದೆ. ಕೇಂದ್ರ ಸರ್ಕಾರದ ಪ್ರಯಾಸ್ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗಿದೆ.
ಭವಿಷ್ಯನಿಧಿ ಶಿವಮೊಗ್ಗ ಪ್ರಾದೇಶಿಕ ಕಚೇರಿ ಸಹಾಯಕ ಆಯುಕ್ತ ಪಿ. ಶ್ರೀನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಿವೃತ್ತರಾಗುವ ನೌಕರರ ಮಾಸಿಕ ಕಂತನ್ನು ಉದ್ಯೋಗದಾತರು ಒಂದು ತಿಂಗಳು ಮೊದಲು ಭವಿಷ್ಯನಿಧಿ ಕಚೇರಿಗೆ ಪಾವತಿಸಿದಲ್ಲಿ ನಿವೃತ್ತಿ ದಿನವೇ ಪಿಂಚಣಿ ಆದೇಶ ನೀಡಲಾಗುತ್ತದೆ. ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬೇಕಿಲ್ಲ. ತಿಂಗಳುಗಟ್ಟಲೆ ಕಾಯುವ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.
ಸಿಬ್ಬಂದಿಯ ಭವಿಷ್ಯ ನಿಧಿಗೆ ಬ್ಯಾಂಕ್ ಖಾತೆ, ಕೆವೈಸಿ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು. ಜಿಲ್ಲೆಯಲ್ಲಿ ಶೇಕಡ 75 ರಷ್ಟು ಸದಸ್ಯರು ಸಮರ್ಪಕವಾಗಿ ಭವಿಷ್ಯನಿಧಿ ಖಾತೆಗೆ ಆಧಾರ್ ಜೋಡಣೆ ಮಾಡಿದ್ದಾರೆ. ಬ್ಯಾಂಕ್ ಹಾಗೂ ಆಧಾರ್ ಮಾಹಿತಿಯನ್ನು ಭವಿಷ್ಯನಿಧಿ ಯುನಿವರ್ಸಲ್ ಅಕೌಂಟ್ ನಂಬರ್ ಗೆ ಜೋಡಣೆ ಮಾಡಿದರೆ ಭವಿಷ್ಯನಿಧಿ ಸದಸ್ಯರ ಮೊಬೈಲ್ ಗೆ ಅಗತ್ಯವಿರುವ ಸಂದರ್ಭದಲ್ಲಿ ಸಂದೇಶ ರವಾನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಭವಿಷ್ಯನಿಧಿ ಪಿಂಚಣಿದಾರರು ಪ್ರತಿವರ್ಷ ಜೀವನ ಪ್ರಮಾಣಪತ್ರ ಸಲ್ಲಿಸಬೇಕಿದೆ. ಇನ್ನುಮುಂದೆ ಸಾಮಾನ್ಯ ಸೇವಾ ಕೇಂದ್ರಗಳು, ಪೋಸ್ಟ್ ಆಫೀಸ್, ಬ್ಯಾಂಕ್ ಮೂಲಕವೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಉಮಂಗ್ ಆಪ್ ಬಳಸಿ ಭವಿಷ್ಯನಿಧಿ ಕಚೇರಿಯ ಅನೇಕ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.