ಬೆಂಗಳೂರು: ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ(ರೇರಾ)ಜಾರಿಗೆ ಮೊದಲು ಭಾಗಶಃ ಭೂ ಸ್ವಾಧಿನಾನುಭವ ಪತ್ರ -ಒಸಿ ಪಡೆದುಕೊಂಡ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತಾಗಿ ಮೆ. ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಪುರಸ್ಕರಿಸಿದೆ. ಮಂಗಳೂರು ಮೂಲದ ಶಾಮ್ ಶೆಟ್ಟಿ 2014ರಲ್ಲಿ ಅರ್ಜಿದಾರ ಕಂಪನಿ ನಿರ್ಮಿಸುವ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಬಿಡಿಎ ನೀಡಿದ್ದಕಮೆನ್ಸ್ ಮೆಂಟ್ ಸರ್ಟಿಫಿಕೇಟ್ ಆಧರಿಸಿ ಅವರು ಫ್ಲ್ಯಾಟ್ ಖರೀದಿಗೆ ಮುಂದಾಗಿದ್ದು, 2015ರ ನವೆಂಬರ್ 18ರಂದು ಬಿಡಿಎ ಭಾಗಶಃ ಒಸಿ ನೀಡಿದ್ದು, 2017ರಲ್ಲಿ ಎರಡನೇ ಒಸಿ ನೀಡಿತ್ತು. ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತಿರುವ ಜಾಗದ ಮಾಲೀಕತ್ವವನ್ನು ಅರ್ಜಿದಾರ ಕಂಪನಿ ಹೊಂದಿಲ್ಲ ಎಂದು ತಿಳಿದುಕೊಂಡಿದ್ದ ಶಾಮ್ ಶೆಟ್ಟಿ ಒಪ್ಪಂದವನ್ನು 2017ರಲ್ಲಿ ರದ್ದುಪಡಿಸಿಕೊಂಡಿದ್ದರು. ಕಂಪನಿ ಅವರಿಗೆ 17.85 ಲಕ್ಷ ರೂ. ಹಿಂತಿರುಗಿಸಿತ್ತು.
ಇನ್ನು 6.84 ಲಕ್ಷ ರೂ. ಬಡ್ಡಿ ಸಮೇತ ಹಣ ನೀಡಲು ಕಂಪನಿಗೆ ಆದೇಶ ನೀಡುವಂತೆ ಕೋರಿ ಶೆಟ್ಟಿ ರೇರಾ ಪ್ರಾಧಿಕಾರಕ್ಕೆ ಶೆಟ್ಟಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ್ದ ರೇರಾ ಪ್ರಾಧಿಕಾರ ಶೆಟ್ಟಿಗೆ 6.84 ಲಕ್ಷ ರೂ ಮರುಪಾವತಿಸುವಂತೆ 2020ರ ಸೆಪ್ಟೆಂಬರ್ 30ರಂದು ಆದೇಶಿಸಿದ್ದು, ಈ ಆದೇಶ ರದ್ದು ಮಾಡುವಂತೆ ಕೋರಿ ಕಂಪನಿ ಹೈಕೋರ್ಟ್ ಮೊರೆ ಹೋಗಿದ್ದು, ಅವರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.