
ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ -ರೇರಾ ಯೋಜನೆಯ ಪ್ರಗತಿ ವಿವರ ಸಲ್ಲಿಸದ ಬಿಲ್ಡರ್ ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ವಿಳಂಬವಾದಲ್ಲಿ 20 ಸಾವಿರ ರೂಪಾಯಿ ದಂಡ ವಿಧಿಸಲು ಮುಂದಾಗಿದೆ.
ಅಪಾರ್ಟ್ ಮೆಂಟ್ ಅಥವಾ ವಸತಿ ಯೋಜನೆ ಪ್ರಗತಿ ಕುರಿತಾಗಿ ನಿಯಮಿತವಾಗಿ ವರದಿ ನೀಡದ ಡೆವಲಪರ್ಗಳು ಮತ್ತು ಬಿಲ್ಡರ್ ಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗುವುದು. ರೇರಾ ಕಾಯ್ದೆ ಅಡಿ ನೋಂದಣಿ ಮಾಡಿಸಿಕೊಂಡಿರುವ ಡೆವಲಪರ್ಗಳು ಮತ್ತು ಬಿಲ್ಡರ್ ಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಯೋಜನೆಗಳ ಪ್ರಗತಿಯ ವಿವರವನ್ನು ವೆಬ್ ಸೈಟ್ ನಲ್ಲಿ ದಾಖಲಿಸಬೇಕಿದೆ.
ನಿಗದಿತ ಅವಧಿ ಮುಗಿದ ನಂತರವೂ ವಿವರ ದಾಖಲಿಸಿದ್ದರೆ ದಂಡ ವಿಧಿಸಲಾಗುವುದು. ತ್ರೈಮಾಸಿಕ ಅವಧಿ ಮುಗಿದ 15 ದಿನಗಳ ನಂತರವೂ ವಿವರ ದಾಖಲಿಸದಿದ್ದರೆ ದಂಡ ಹಾಕಲು ಮೊದಲ ತಿಂಗಳಿಗೆ 10 ಸಾವಿರ ರೂಪಾಯಿವರೆಗೆ ನಂತರ ತಿಂಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.
ಗ್ರಾಹಕರು ನೀಡಿದ ಹಣವನ್ನು ಬಿಲ್ಡರ್ ಗಳು ಸಂಬಂಧಿತ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಅಥವಾ ಬೇರೆ ಕಡೆ ಹೂಡಿಕೆ ಮಾಡಿದ್ದಾರೆಯೇ ಎಂಬುದು ಬಿಲ್ಡರ್ ಗಳು ನೀಡುವ ಮಾಹಿತಿಯಿಂದ ಗೊತ್ತಾಗುತ್ತದೆ. ವಿವರ ದಾಖಲಿಸದವರಿಗೆ ದಂಡ ವಿಧಿಸಲಿದ್ದು, ನಂತರವೂ ಮಾಹಿತಿ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.