ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ರಿಲಾಯನ್ಸ್ ಜಿಯೋ ಈಗ ಸ್ಮಾರ್ಟ್ಫೋನ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇತ್ತೀಚಿನ ವರದಿಯ ಪ್ರಕಾರ, ರಿಲಯನ್ಸ್ ಜಿಯೋ ಈ ವರ್ಷದ ಅಂತ್ಯದ ವೇಳೆಗೆ 100 ಮಿಲಿಯನ್ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆಯಂತೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ಗಳನ್ನು ಡೇಟಾ ಪ್ಯಾಕ್‌ಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಹೇಳ್ತಿವೆ. ಡಿಸೆಂಬರ್ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ ಬರಲಿದೆ.
ಗೂಗಲ್ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ, ರಿಲಯನ್ಸ್ ಜಿಯೋ ಕಂಪನಿಯು 100 ಮಿಲಿಯನ್‌ಗಿಂತಲೂ ಕಡಿಮೆ ವೆಚ್ಚದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ತಯಾರಿ ನಡೆಸುತ್ತಿದೆಯಂತೆ. ಗೂಗಲ್ ಕಡಿಮೆ ವೆಚ್ಚದಲ್ಲಿ 4 ಜಿ ಅಥವಾ 5 ಜಿ ಸ್ಮಾರ್ಟ್ಫೋನ್ ಗಳಿಗಾಗಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಿರ್ಮಿಸಲಿದೆ. ಅದನ್ನು ರಿಲಯನ್ಸ್ ವಿನ್ಯಾಸಗೊಳಿಸಲಿದೆ ಎಂದು ರಿಲಯನ್ಸ್ ಜಿಯೋ ಮಾಲೀಕ ಮುಖೇಶ್ ಅಂಬಾನಿ ಜುಲೈನಲ್ಲಿ ಹೇಳಿದ್ದರು.
ಜಿಯೋದ ಹೊಸ ಅಗ್ಗದ ಆಂಡ್ರಾಯ್ಡ್ 4 ಜಿ ಮತ್ತು 5 ಜಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರ್ತಿದ್ದಂತೆ, ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳಾದ ಶಿಯೋಮಿ, ರಿಯಲ್ಮೆ, ಒಪ್ಪೊ ಮತ್ತು ವಿವೊಗೆ ಕಠಿಣ ಸ್ಪರ್ಧೆಯೊಡ್ಡಲಿದೆ. ಸದ್ಯ ಜಿಯೋ ಫೀಚರ್ ಮೊಬೈಲ್ ಮಾರುಕಟ್ಟೆಯಲ್ಲಿದೆ. 2017ರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಜಿಯೋ ಫೋನ್ ಪ್ರಸ್ತುತ 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ.