ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಜೊತೆ ಕೈಜೋಡಿಸಿದೆ. ಈ ಮೂಲಕ ಮೂರು ವಲಯದ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಜಿಯೋ ಮುಂದಾಗಿದೆ. ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಆಂಧ್ರಪ್ರದೇಶ, ದೆಹಲಿ ಮತ್ತು ಮುಂಬೈ ವಲಯಗಳ 800 ಮೆಗಾಹರ್ಟ್ಸ್ ಬ್ಯಾಂಡ್ ನಲ್ಲಿ ಸ್ಪೆಕ್ಟ್ರಮ್ ಹಕ್ಕುಗಳನ್ನು ಖರೀದಿಸಿದೆ. 800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ ಆಂಧ್ರಪ್ರದೇಶದಲ್ಲಿ 3.75, ದೆಹಲಿಯಲ್ಲಿ 1.25 ಮತ್ತು ಮುಂಬೈನಲ್ಲಿ 2.50 ಮೆಗಾಹರ್ಟ್ಸ್ ಬಳಸುವ ಮೂಲಕ ರಿಲಯನ್ಸ್ ಜಿಯೋ ಉತ್ತಮ ಸೇವೆ ನೀಡಲಿದೆ.
ದೂರಸಂಪರ್ಕ ಇಲಾಖೆ ಹೊರಡಿಸಿದ ಸ್ಪೆಕ್ಟ್ರಮ್ ವ್ಯಾಪಾರ ಮಾರ್ಗಸೂಚಿಗಳ ಪ್ರಕಾರ, ಈ ವ್ಯಾಪಾರ ಒಪ್ಪಂದವನ್ನು ಮಾಡಲಾಗಿದೆ. ಎಲ್ಲಾ ನಿಯಂತ್ರಕ ಮತ್ತು ಶಾಸನಬದ್ಧ ಅನುಮೋದನೆಗಳ ನಂತರವೇ ಒಪ್ಪಂದ ಜಾರಿಗೆ ಬರಲಿದೆ. ಸ್ಪೆಕ್ಟ್ರಮ್ ಖರೀದಿಸಲು ರಿಲಯನ್ಸ್ ಜಿಯೋ ಒಟ್ಟು 1,497 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಸ್ಪೆಕ್ಟ್ರಮ್ ಬಳಕೆಗೆ ಒಪ್ಪಂದದ ನಂತರ, ರಿಲಯನ್ಸ್ ಜಿಯೋ ಮುಂಬೈ ಸರ್ಕಲ್ನ 800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 2X15MHz ಸ್ಪೆಕ್ಟ್ರಮ್ ಮತ್ತು ಆಂಧ್ರಪ್ರದೇಶ ಮತ್ತು ದೆಹಲಿ ವಲಯಗಳಲ್ಲಿನ 800MHz ಬ್ಯಾಂಡ್ನಲ್ಲಿ 2X10MHz ಸ್ಪೆಕ್ಟ್ರಮ್ ಹೊಂದಿರಲಿದೆ. ಈ ವಲಯಗಳಲ್ಲಿ ಸ್ಪೆಕ್ಟ್ರಮ್ ಆಧಾರಿತ ಗ್ರಾಹಕ ಸೇವೆ ಮತ್ತಷ್ಟು ಬಲಗೊಳ್ಳಲಿದೆ.