ಏಷ್ಯಾದ ಶ್ರೀಮಂತ ಉದ್ಯಮಿ ಚೀನಾದ ಜೋಂಗ್ ಶನ್ಷನ್ ಅವರನ್ನು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದಾರೆ. ಈ ಮೂಲಕ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ.
ಕಳೆದ ಎರಡು ವರ್ಷದ ಅವಧಿಯಲ್ಲಿ ಹೆಚ್ಚಿನ ಸಮಯ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದರು. ಅವರಿಗಿಂತ ಮೊದಲು ಜಾಕ್ ಮಾ ಅವರು ಶ್ರೀಮಂತ ಉದ್ಯಮಿಯಾಗಿದ್ದರು.
ಜೋಂಗ್ ಶನ್ಷನ್ ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ಏಷ್ಯಾದ ಶ್ರೀಮಂತ ಉದ್ಯಮಿ ಪಟ್ಟ ಅಲಂಕರಿಸಿದ್ದರು. ಮಾತ್ರವಲ್ಲ, ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಆರನೇ ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಮುಖೇಶ್ ಅಂಬಾನಿ ಅದೃಷ್ಟ ಮತ್ತೆ ಖುಲಾಯಿಸಿದ್ದು ಅವರ ಆಸ್ತಿ ಮೌಲ್ಯ 5.84 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದೇ ವೇಳೆ ಜೋಂಗ್ ಶನ್ಷನ್ ಅವರ ಸಂಪತ್ತು ಕರಗಿದ್ದು, ಮುಖೇಶ್ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ.