ಹಾವೇರಿ: ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ 50,111 ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ .
ಅಡಿಕೆಗೆ ಪೈಪೋಟಿ ನೀಡುವಂತೆ ಮೆಣಸಿನಕಾಯಿ ದರ ಏರಿಕೆಯಾಗಿರುವುದು ಬೆಳೆಗಾರರಲ್ಲಿ ಹರ್ಷ ತಂದಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 1,05,090 ಚೀಲ ಮೆಣಸಿನಕಾಯಿ ಮಾರಾಟಕ್ಕೆ ಬಂದಿದ್ದು, ಡಬ್ಬಿ ಮೆಣಸಿನಕಾಯಿ ತಳಿ ಕ್ವಿಂಟಾಲ್ ಗೆ 50,111 ರೂಪಾಯಿಗೆ ಮಾರಾಟವಾಗಿದೆ.
ಕಳೆದ ವಾರ ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್ ಗೆ 33,500 ರೂ., ನಂತರ 45,111 ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಸೋಮವಾರ 5000 ರೂ. ಹೆಚ್ಚಾಗಿ 50 ಸಾವಿರ ರೂ. ಗಡಿದಾಟಿದೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಮಾರುಕಟ್ಟೆ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಾಗಿದೆ.
ಗದಗ ಜಿಲ್ಲೆ ಬೆಟಗೇರಿಯ ಮಲ್ಲಿಕಾರ್ಜುನ ಎಂಬ ರೈತರು ಮಾರಾಟಕ್ಕೆ ತಂದಿದ್ದ ಮೆಣಸಿನಕಾಯಿಯನ್ನು ಆರ್.ಆರ್. ಆಲದಗೇರಿ ಎಂಬ ವ್ಯಾಪಾರಸ್ಥರು ಈ ಮೊತ್ತ ನೀಡಿ ಖರೀದಿಸಿದ್ದಾರೆ.