ಬೆಂಗಳೂರು: ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ(ಎನ್ಎಆರ್ ಇಡಿಸಿಒ)ಯ ಕರ್ನಾಟಕ ಶಾಖೆ ಆರಂಭಿಸಿರುವ ವಾಟ್ಸ್ಅಪ್ ಸಹಾಯವಾಣಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವೆಬಿನಾರ್ ಮೂಲಕ ಚಾಲನೆ ನೀಡಿದರು.
ರಿಯಲ್ ಎಸ್ಟೇಟ್ ವಲಯದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎನ್ಎಆರ್ ಇಡಿಸಿಒ ಈ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆ 888844 50913. ರಿಯಲ್ ಎಸ್ಟೇಟ್ ವಲಯದಲ್ಲಿ ಅತ್ಯಗತ್ಯವಾದ ಕಾನೂನು ಪಾಲನೆಗಳು, ಸಂಬಂಧಿತ ಇಲಾಖೆಗಳ ನಿಯಮ ಹೀಗೆ ಅನೇಕ ವಿಷಯಗಳ ಕುರಿತಂತೆ ಮಾಹಿತಿ ತಿಳಿಯುವುದು ಅಗತ್ಯವಾಗಿರುತ್ತದೆ.
ರೇರಾ(ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ), ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜನರಿಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲವಿದೆ. ಹೀಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೇ ಸೂರಿನಡಿ ಪಡೆಯಲು ಈ ಸಹಾಯವಾಣಿ ಅನುಕೂಲವಾಗಲಿದೆ ಎಂದು ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದ್ದಾರೆ.
ಸರ್ಕಾರದ ನೀತಿ, ಆಡಳಿತ ಇಲಾಖೆಗಳ ನಿಯಮಾವಳಿಗಳು, ತೆರಿಗೆ ಸಂಬಂಧಿತ ಮಾಹಿತಿ, ಹಣಕಾಸು ಮಾಹಿತಿ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಹಾಯವಾಣಿ ಮೂಲಕ ಸಾರ್ವಜನಿಕರು, ರಿಯಲ್ ಎಸ್ಟೇಟ್ ಮಂಡಳಿಯ ಸದಸ್ಯರು ಉತ್ತರ ಕಂಡುಕೊಳ್ಳಬಹುದಾಗಿದೆ.
ತಾಂತ್ರಿಕ, ಕಾನೂನು, ಹಣಕಾಸು, ನಿರ್ಮಾಣ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ 10 ವಿವಿಧ ಸಮಿತಿಗಳನ್ನು ಪ್ರತಿನಿಧಿಸುವ ಮಂಡಳಿಯ ತಜ್ಞರು ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಈ ಉಪಕ್ರಮ ಕೇವಲ ರಿಯಲ್ ಎಸ್ಟೇಟ್ ವೃತ್ತಿಪರರು ಮಾತ್ರವಲ್ಲದೇ ಸಾರ್ವಜನಿಕರಿಗೂ ಅನುಕೂಲವಾಗುವ ನಿರೀಕ್ಷೆ ಇದೆ.