ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಆರ್.ಬಿ.ಐ. ಶುಕ್ರವಾರ ಘೋಷಣೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ನಲ್ಲಿ ಡಿಜಿಟ್ ಕರೆನ್ಸಿ ಜಾರಿಗೆ ತರುವುದಾಗಿ ಘೋಷಿಸಿದ್ದರು. ಪ್ರಾಯೋಗಿಕವಾಗಿ ಇ-ರುಪಿ ಜಾರಿಗೆ ಬರಲಿದ್ದು, ಇದರ ನಿರ್ದಿಷ್ಟ ಸ್ವರೂಪ ಮತ್ತು ಲಾಭಗಳನ್ನು ಕಾಲಕಾಲಕ್ಕೆ ತಿಳಿಸಿ ಮಾಹಿತಿ ನೀಡಲಾಗುತ್ತದೆ.
ಪ್ರಸ್ತುತ ಇರುವ ಕರೆನ್ಸಿಗಳಿಗೆ ಹೆಚ್ಚುವರಿಯಾಗಿ ಇ -ರುಪಿ ಸೇರಿಕೊಳ್ಳಲಿದ್ದು, ಬ್ಯಾಂಕ್ ನೋಟುಗಳಿಗೂ ಇದಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಡಿಜಿಟಲ್ ಮಾದರಿ ಆಗಿರುವ ಕಾರಣ ವ್ಯವಹಾರ ವೇಗ ಮತ್ತು ಸುಲಭವಾಗಿ ನಡೆಯಲಿದೆ. ಇತರೆ ಡಿಜಿಟಲ್ ಕರೆನ್ಸಿಗಳಂತೆ ವ್ಯವಹಾರಿಕ ಲಾಭವನ್ನು ಇದು ತಂದು ಕೊಡುತ್ತದೆ ಎಂದು ಆರ್ಬಿಐ ತಿಳಿಸಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ಭೌತಿಕ ನೋಟುಗಳ ಡಿಜಿಟಲ್ ಆವೃತ್ತಿಯಂತೆ ಇ-ರುಪಿ ಇರಲಿದೆ. ಕೇಂದ್ರೀಯ ಡಿಜಿಟಲ್ ಕರೆನ್ಸಿ ಬ್ಯಾಂಕ್ ಇದನ್ನು ನಿಯಂತ್ರಿಸುತ್ತದೆ. ನಗದು ಕೊಟ್ಟು ಡಿಜಿಟಲ್ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.