ಮುಂಬೈ: ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೊಸ ನಿಯಮ ರೂಪಿಸಿದ್ದು, 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ.
ಹೊಸ ನಿಯಮದ ಅನ್ವಯ ಬೆಂಕಿ ಅನಾಹುತ, ಕಳವು, ಕಟ್ಟಡ ಕುಸಿತ, ಬ್ಯಾಂಕ್ ಸಿಬ್ಬಂದಿಯಿಂದ ವಂಚನೆ ನಡೆದ ಸಂದರ್ಭದಲ್ಲಿ ಬ್ಯಾಂಕುಗಳು ಲಾಕರ್ ನ ವಾರ್ಷಿಕ ಬಾಡಿಗೆ ಮೊತ್ತದ ನೂರು ಪಟ್ಟು ಮೊತ್ತ ಭರಿಸಬೇಕಿದೆ ಎನ್ನಲಾಗಿದೆ.
ಪಾರದರ್ಶಕತೆ ಕಾಯ್ದುಕೊಳ್ಳಲು ಆರ್ಬಿಐ ಸೂಚನೆ ನೀಡಿದ್ದು, ಅಪಾಯಕಾರಿ ವಸ್ತುಗಳನ್ನು ಲಾಕರ್ ನಲ್ಲಿ ಇಡದಂತೆ ಒಪ್ಪಂದಕ್ಕೆ ಸಹಿ ಪಡೆಯಬೇಕು ಎಂದು ತಿಳಿಸಿದೆ.
ಈಗಾಗಲೇ ಇರುವ ಲಾಕರ್ ಗಳಿಗೂ ನಿಯಮ ಅನ್ವಯವಾಗಲಿದ್ದು, ಭೂಕಂಪ, ಪ್ರವಾಹ, ಸಿಡಿಲು, ಯಾವುದೇ ಪ್ರಾಕೃತಿಕ ವಿಕೋಪ ಅಥವಾ ಮಾನವ ನಿಯಂತ್ರಣಕ್ಕೆ ಮೀರಿದ ಬೆಳವಣಿಗೆ ಮತ್ತು ಗ್ರಾಹಕರ ಅಜಾಗರೂಕತೆಯಿಂದ ಲಾಕರ್ ನಲ್ಲಿದ್ದ ವಸ್ತುವಿಗೆ ಹಾನಿಯಾದಾಗ ಬ್ಯಾಂಕ್ ಹೊಣೆಯಾಗಿರುವುದಿಲ್ಲ ಎಂದು ಹೇಳಲಾಗಿದೆ.
ಲಾಕರ್ ಇರುವ ಸ್ಥಳದಲ್ಲಿ ಸುರಕ್ಷತೆಯ ಬಗ್ಗೆ ನಿಗಾವಹಿಸುವುದು ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ. ಬೆಂಕಿ, ಅನಾಹುತ, ಕಳವು, ಬ್ಯಾಂಕ್ ಸಿಬ್ಬಂದಿ ವಂಚನೆ ಸಂದರ್ಭದಲ್ಲಿ ಬ್ಯಾಂಕುಗಳು ಹೊಣೆ ಹೊರಬೇಕು. ಸತತ ಮೂರು ವರ್ಷ ಬಾಡಿಗೆ ನೀಡದ ಲಾಕರ್ ಗಳನ್ನು ಒಡೆಯುವ ಅಧಿಕಾರ ಬ್ಯಾಂಕುಗಳಿಗೆ ಇದೆ ಎನ್ನಲಾಗಿದೆ.