ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಸಮಿತಿ ಇಂದಿನಿಂದ ಬುಧವಾರದವರೆಗೆ ಸಭೆ ನಡೆಸಲಿದ್ದು, ಬುಧವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಾಗುವುದು.
ಹಿಂದಿನ ಸಾಲ ನೀತಿ ವೇಳೆ ತಲಾ 0.50 ರಷ್ಟು ಬಡ್ಡಿ ದರ ಹೆಚ್ಚಳ ಮಾಡಿದ್ದ ಆರ್‌ಬಿಐ ಈ ಬಾರಿ ರೆಪೊ ದರವನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ. ತಜ್ಞರ ಪ್ರಕಾರ ಶೇಕಡ 0.25 ರಿಂದ ಶೇಕಡ 0.35 ರಷ್ಟು ರೆಪೊ ದರ ಹೆಚ್ಚಳವಾಗಬಹುದು.
ಈಗಾಗಲೇ ಮೂರು ಸಲ ಶೇಕಡ 0.50 ಬಡ್ಡಿ ದರ ಹೆಚ್ಚಳ ಮಾಡಿದ್ದ ಆರ್‌ಬಿಐ ಈ ಬಾರಿ ಕಡಿಮೆ ಪ್ರಮಾಣದಲ್ಲಿ ರೆಪೊ ದರ ಏರಿಕೆ ಮಾಡಲಿದೆ. ಕಳೆದ ಮೇ ತಿಂಗಳಿನಿಂದ ಇದುವರೆಗೆ ರೆಪೊ ದರವನ್ನು ಶೇಕಡ 1.90 ರಷ್ಟು ಏರಿಕೆ ಮಾಡಲಾಗಿದೆ.
ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಶೇಕಡ 0.35 ರಷ್ಟರವರೆಗೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಜಿಡಿಪಿ ಬೆಳವಣಿಗೆ ಪ್ರಮಾಣ ಎರಡನೇ ತ್ರೈಮಾಸಿಕದಲ್ಲಿ ತಗ್ಗಿದೆ. ಹಣದುಬ್ಬರ ಶೇಕಡ 6 ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್.ಬಿ.ಐ. ಹಣಕಾಸು ನೀತಿ ಪ್ರಕಟಿಸಲಿದೆ. ರೆಪೊ ದರ ಏರಿಕೆಯಾಗ್ತಿದ್ದಂತೆ ಬ್ಯಾಂಕ್ ಗಳಲ್ಲಿ ವಾಹನ, ಗೃಹ ಸೇರಿದಂತೆ ವಿವಿಧ ಸಾಲದ ಮೇಲಿನ ಬಡ್ಡಿದರ ಇಎಂಐ ಹೆಚ್ಚಾಗಲಿದೆ.