ನವದೆಹಲಿ: ಆರ್.ಬಿ.ಐ. ಮುಂದಿನ ದಿನಗಳಲ್ಲಿ ರೆಪೊ ದರ ಕಡಿಮೆ ಮಾಡಬಹುದಾಗಿದ್ದು, ಇದರಿಂದ ಸಾಲದ ಇಎಂಐ ಹೊರೆ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಕಹಿ ಸುದ್ದಿ ಸಿಕ್ಕಿದೆ.
ಆರ್‌ಬಿಐ ಬಡ್ಡಿ ದರವನ್ನು 2025ರ ದ್ವಿತೀಯಾರ್ಧದಲ್ಲಿ ಇಳಿಕೆ ಮಾಡಬಹುದು. ಅಲ್ಲಿಯವರೆಗೆ ಬಡ್ಡಿ ದರ ಕಡಿಮೆಯಾಗುವ ಸಾಧ್ಯತೆ ಇಲ್ಲ. ಹಣದುಬ್ಬರವನ್ನು ಶೇಕಡ 4ರ ಸಮೀಪಕ್ಕೆ ಇಳಿಸಲು ಆರ್‌ಬಿಐ ಕಠಿಣ ನಿಲುವು ಅನುಸರಿಸುತ್ತಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಗಳು ಬಡ್ಡಿದರ ಇಳಿಕೆಯಾಗಲು ಪೂರಕವಾಗಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಆರ್ಥಿಕ ಪರಾಮರ್ಶೆ ಸಭೆ ನಡೆಸಿದ್ದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ನೀಡಿದ ಮಾಹಿತಿಯಂತೆ, ಕೇಂದ್ರ ಬ್ಯಾಂಕಿನ ಹಣದುಬ್ಬರ ಗುರಿ ಶೇಕಡ 4ರಷ್ಟು ಆಗಿದೆ. 2025ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಸರಾಸರಿ ಶೇಕಡ 4.5ಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿದ್ದು, ಅಲ್ಲಿವರೆಗೂ ರೆಪೊ ದರ ಎಣಿಕೆಯ ಸಾಧ್ಯತೆ ಇಲ್ಲ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಮುಂದಿನ ಆರ್ಥಿಕ ವರ್ಷದಲ್ಲಿ ಹಣದುಬ್ಬರ ಇಳಿಕೆಯಾಗುವ ನಿರೀಕ್ಷೆ ಇದೆ. ಮುಂಗಾರು ಮಳೆ ವ್ಯತ್ಯಾಸ, ಜಾಗತಿಕ ಬೆಳವಣಿಗೆಗಳ ಪ್ರಭಾವದಿಂದ ಇದು ಕಷ್ಟ ಸಾಧ್ಯ ಎಂದು ಹೇಳಲಾಗಿದೆ.