ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಣದುಬ್ಬರದ ಒತ್ತಡ ತಡೆಯಲು ಬುಧವಾರ ರೆಪೊ ದರವನ್ನು ಅಥವಾ ಪ್ರಮುಖ ಸಾಲದ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ 6.25% ಕ್ಕೆ ಏರಿಸಿದೆ.
ನಮ್ಮ ಆರ್ಥಿಕ ವ್ಯವಸ್ಥೆಯು ದೃಢವಾಗಿ ಮತ್ತು ಸ್ಥಿರವಾಗಿ ಉಳಿದಿದೆ ಮತ್ತು ಕಾರ್ಪೊರೇಟ್‌ಗಳು ಮೊದಲಿಗಿಂತ ಆರೋಗ್ಯಕರವಾಗಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ವಿತ್ತೀಯ ನೀತಿ ಸಮಿತಿ ಸಭೆಯು ಡಿ. 5, 6 ಮತ್ತು 7 ರಂದು ನಡೆದು, ಆರ್ಥಿಕ ಪರಿಸ್ಥಿತಿ ಮತ್ತು ಮೌಲ್ಯಮಾಪನದ ಆಧಾರದ ಮೇಲೆ MPC 6 ರಲ್ಲಿ 5 ಸದಸ್ಯರ ಬಹುಮತದಿಂದ ಪಾಲಿಸಿ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ 6.25% ಗೆ ತಕ್ಷಣದಿಂದಲೇ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಮೂರು ಸಲ ಶೇಕಡ 0.50 ಬಡ್ಡಿ ದರ ಹೆಚ್ಚಳ ಮಾಡಿದ್ದ ಆರ್‌ಬಿಐ ಈ ಬಾರಿ ಶೇ.0.35 ರಷ್ಟು ರೆಪೊ ದರ ಏರಿಕೆ ಮಾಡಿದೆ. ಕಳೆದ ಮೇ ತಿಂಗಳಿನಿಂದ ಇದುವರೆಗೆ ರೆಪೊ ದರವನ್ನು ಶೇಕಡ 2.25 ರಷ್ಟು ಏರಿಕೆ ಮಾಡಲಾಗಿದೆ.
ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಶೇಕಡ 0.35 ರಷ್ಟು ರೆಪೊ ದರ ಹೆಚ್ಚಳ ಮಾಡಲಾಗಿದೆ. ಜಿಡಿಪಿ ಬೆಳವಣಿಗೆ ಪ್ರಮಾಣ ಎರಡನೇ ತ್ರೈಮಾಸಿಕದಲ್ಲಿ ತಗ್ಗಿದೆ. ಹಣದುಬ್ಬರ ಶೇಕಡ 6 ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್.ಬಿ.ಐ. ಹಣಕಾಸು ನೀತಿ ಪ್ರಕಟಿಸಿದೆ. ರೆಪೊ ದರ ಏರಿಕೆಯಾಗ್ತಿದ್ದಂತೆ ಬ್ಯಾಂಕ್ ಗಳಲ್ಲಿ ವಾಹನ, ಗೃಹ ಸೇರಿದಂತೆ ವಿವಿಧ ಸಾಲದ ಮೇಲಿನ ಬಡ್ಡಿದರ ಇಎಂಐ ಹೆಚ್ಚಾಗಲಿದೆ. ಸಾಲಗಾರರಿಗೆ ಮತ್ತಷ್ಟು ಹೊರೆಯಾಗಲಿದೆ.