ಮುಂಬಯಿ: ನಗರಸಭೆ, ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಸಂಸದರು, ಶಾಸಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ.
ನಗರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೂರ್ಣಾವಧಿ ನಿರ್ದೇಶಕರ ಹುದ್ದೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಪೂರ್ಣಾವಧಿ ನಿರ್ದೇಶಕ ಹುದ್ದೆಗೇರುವವರಿಗೆ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಕನಿಷ್ಠ 35 ಗರಿಷ್ಠ 70 ವರ್ಷ ವಯೋಮಿತಿಯನ್ನು ಕೂಡ ನಿಗದಿ ಮಾಡಲಾಗಿದೆ.
ನಗರಸಭೆ, ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಸಂಸದರು, ಶಾಸಕರು ಸಹಕಾರ ಬ್ಯಾಂಕ್ ಗಳಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಳ್ಳುವಂತಿಲ್ಲ. ಅದೇ ರೀತಿ ವ್ಯಾಪಾರೋದ್ಯಮದಲ್ಲಿ ತೊಡಗಿದ್ದವರು ಯಾವುದೇ ಕಂಪನಿ ಹೊಂದಿದವರು ಹುದ್ದೆಗಳನ್ನು ಹೊಂದಲು ಅವಕಾಶ ನಿರಾಕರಿಸಲಾಗಿದೆ. ಕ್ರಿಮಿನಲ್ ಅಪರಾಧಗಳಲ್ಲಿ ದೋಷಿಗಳಾದವರು ಇಂತಹ ಹುದ್ದೆಗಳು ಪಡೆಯಲು ಅನರ್ಹರಾಗಿರುತ್ತಾರೆ.
ವ್ಯವಸ್ಥಾಪಕ ನಿರ್ದೇಶಕ ಅಥವಾ ಪೂರ್ಣಾವಧಿ ನಿರ್ದೇಶಕ ಹುದ್ದೆಗೇರುವವರು ಸ್ನಾತಕೋತ್ತರ ಪದವಿಧರರಾಗಿರಬೇಕು. ಇಲ್ಲವೇ ಚಾರ್ಟರ್ಡ್ ಅಕೌಂಟೆಂಟ್. ಎಂಬಿಎ ಅಥವಾ ಸಹಕಾರ ವಹಿವಾಟು, ಬ್ಯಾಂಕಿಂಗ್ ನಿರ್ವಹಣೆಯ ಡಿಪ್ಲೊಮೊ ಪೂರ್ಣಗೊಳಿಸಿರಬೇಕೆಂದು ಹೇಳಲಾಗಿದೆ.