ನವದೆಹಲಿ: ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ವಾಣಿಜ್ಯ ಬ್ಯಾಂಕುಗಳು ಎಲ್ಲಾ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿವೆ.
ಬ್ಯಾಂಕ್ ಆಫ್ ಬರೋಡಾ ಮತ್ತು ಐಸಿಐಸಿಐ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಏರಿಕೆ ಘೋಷಿಸಿವೆ. ಉಳಿದ ಬ್ಯಾಂಕುಗಳು ಕೂಡ ಇದೇ ಹಾದಿಯನ್ನು ಅನುಸರಿಸುವ ನಿರೀಕ್ಷೆ ಇದೆ. ಬುಧವಾರದಿಂದಲೇ ಜಾರಿಗೆ ಬರುವಂತೆ ರೆಪೋ ಆಧಾರಿತ ಸಾಲದ ಮೇಲಿನ ಬಡ್ಡಿಯನ್ನು ಐಸಿಐಸಿಐ ಬ್ಯಾಂಕ್ ಶೇ. 8.10 ಕ್ಕೆ ಹೆಚ್ಚಳ ಮಾಡಿದೆ. ಬ್ಯಾಂಕ್ ಆಫ್ ಬರೋಡಾ ಗುರುವಾರದಿಂದ ಅನ್ವಯವಾಗುವಂತೆ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 6.90ಕ್ಕೆ ಏರಿಕೆ ಮಾಡಿದೆ.
ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಶೇಕಡ 0.40 ರಷ್ಟು ಹೆಚ್ಚಿಸಿದ ಬೆನ್ನಲ್ಲೇ ವಾಣಿಜ್ಯ ಬ್ಯಾಂಕುಗಳಿಂದ ಈ ಪ್ರಕಟಣೆ ಹೊರಬಿದ್ದಿದೆ. ಇದರಿಂದಾಗಿ ಗ್ರಾಹಕರಿಗೆ ಇಎಂಐ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಸಾಲದ ಬಡ್ಡಿದರಗಳು ಗಣನೀಯ ಏರಿಕೆಯಾಗಲಿವೆ ಎಂದು ಹೇಳಲಾಗಿದೆ.