ಮುಂಬೈ: ಅನಧಿಕೃತ ಡಿಜಿಟಲ್ ಸಾಲ ವಿತರಣಾ ಸಂಸ್ಥೆಗಳಿಗೆ ಬ್ರೇಕ್ ಹಾಕಲು ಶೀಘ್ರದಲ್ಲಿಯೇ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಡಿಜಿಟಲ್ ಆಪ್ ಗಳಿಗೆ ಕಡಿವಾಣ ಹಾಕಲಾಗುವುದು. ಅದಕ್ಕಾಗಿ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಕೆಲವು ಅನಧಿಕೃತ ಸಾಲ ವಿತರಣಾ ಸಂಸ್ಥೆಗಳು ಕಾನೂನು ಬಾಹಿರವಾಗಿದ್ದು, ಅಂತಹ ಕೆಲವು ಸಂಸ್ಥೆಗಳ ಕಿರುಕುಳಕ್ಕೆ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುತ್ತದೆ. ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಂದ ಸಾಲ ಪಡೆದುಕೊಂಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲಾಗುವುದು. ಸಾಲ ಪಡೆದುಕೊಳ್ಳುವ ಮೊದಲು ಇಂತಹ ಆಪ್ ಗಳು ಆರ್.ಬಿ.ಐ.ನಲ್ಲಿ ನೋಂದಣಿಯಾಗಿವೆಯೇ ಎಂಬುದನ್ನು ಗ್ರಾಹಕರು ಪರಿಶೀಲಿಸಬೇಕು. ಸಾಲ ನೀಡುವ ಅನಧಿಕೃತ ಡಿಜಿಟಲ್ ಆಪ್ ಗಳಿಂದ ತೊಂದರೆ ಉಂಟಾದಲ್ಲಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬೇಕೆಂದು ಹೇಳಲಾಗಿದೆ.