ನವದೆಹಲಿ: ಏಪ್ರಿಲ್ 1 ರಿಂದ ಜಾರಿಯಾಗಬೇಕಿದ್ದ ಆಟೋ ಪೇಮೆಂಟ್ ಹೊಸ ನಿಯಮವನ್ನು ಸೆಪ್ಟಂಬರ್ 30 ರವರೆಗೆ ಮುಂದೂಡಲಾಗಿದೆ. ಇದರಿಂದಾಗಿ ಗ್ರಾಹಕರು ಸದ್ಯಕ್ಕೆ ನಿರಾಳರಾಗಿದ್ದಾರೆ.
ಆಟೋ ಪೇಮೆಂಟ್ ಕುರಿತ ಹೊಸ ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯಕ್ಕೆ ಕೈಬಿಟ್ಟಿದೆ. ಬ್ಯಾಂಕುಗಳು ಮತ್ತು ಗ್ರಾಹಕರಿಗೆ ಸೆ. 30 ರವರೆಗೆ ಹಳೆ ನಿಯಮ ಅನ್ವಯಿಸಲಿದೆ ಎಂದು ಹೇಳಲಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಪೇಮೆಂಟ್ ಬ್ಯಾಂಕುಗಳ ಮೂಲಕ ಗ್ರಾಹಕರು ವಿದ್ಯುತ್ ಬಿಲ್, ನೀರಿನ ಬಿಲ್, ಮೊದಲಾದವುಗಳನ್ನು ಪ್ರತಿತಿಂಗಳು ಆಟೋ ಪೇಮೆಂಟ್ ಮಾಡುತ್ತಾರೆ. ಹೀಗೆ ಪ್ರತಿ ತಿಂಗಳು ಆಟೋ ಪೇಮೆಂಟ್ ಆಗುವ ಮೊದಲು ಗ್ರಾಹಕರ ಅನುಮತಿ ಪಡೆಯಬೇಕು. 5 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಪಾವತಿಗೆ ಒಟಿಪಿ ವ್ಯವಸ್ಥೆ ಜಾರಿಗೆ ತರಬೇಕೆಂದು ಹೇಳಿದ್ದ ಆರ್.ಬಿ.ಐ. ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ತರಲು ಸೂಚಿಸಿತ್ತು.
ಆದರೆ, ಬ್ಯಾಂಕುಗಳು ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳದ ಕಾರಣ ಗ್ರಾಹಕರಲ್ಲಿ ಆತಂಕ ಎದುರಾಗಿತ್ತು. ಸೆಪ್ಟೆಂಬರ್ 30 ರ ವರೆಗೆ ಆಟೋ ಪೇಮೆಂಟ್ ನಿಯಮ ಮುಂದೂಡಿರುವುದರಿಂದ ಗ್ರಾಹಕರು ಮತ್ತು ಬ್ಯಾಂಕುಗಳಿಗೆ ಸದ್ಯಕ್ಕೆ ಸಮಸ್ಯೆ ಇಲ್ಲವಾಗಿದೆ.