ನವದೆಹಲಿ: ದೇಶದ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಉಸ್ತುವಾರಿಗೆ ಒಳಪಡಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಹಕಾರ ಬ್ಯಾಂಕುಗಳನ್ನು ಆರ್.ಬಿ.ಐ. ಉಸ್ತುವಾರಿಗೆ ವಹಿಸಲಾಗಿದೆ. ಈ ಕುರಿತ ಸುಗ್ರೀವಾಜ್ಞೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇತ್ತೀಚೆಗೆ ಕೆಲವು ಬ್ಯಾಂಕುಗಳಲ್ಲಿ ನಡೆದ ವಂಚನೆ ಪ್ರಕರಣಗಳಿಂದ ಗ್ರಾಹಕರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತ ಕಾಯಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ಅನೇಕ ಕ್ರಮಕೈಗೊಂಡಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ. ಸುಗ್ರೀವಾಜ್ಞೆ ಜಾರಿಯಾದ ನಂತರ ಎಲ್ಲಾ ಸಹಕಾರಿ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ವ್ಯಾಪ್ತಿಗೆ ಬರಲಿದೆ. ಬ್ಯಾಂಕುಗಳ ಠೇವಣಿದಾರರಿಗೆ ಸುರಕ್ಷತೆ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.