ನಿವಾರ್ ಚಂಡಮಾರುತದಿಂದಾಗಿ ರೈಲ್ವೆ ಇಲಾಖೆಯು ತಮಿಳುನಾಡು, ಪಾಂಡಿಚೆರಿಯಿಂದ ಸಂಚರಿಸುವ ಒಂದು ಡಜನ್ ಗೂ ಹೆಚ್ಚು ವಿಶೇಷ ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದೆ. ಇದೇ ವೇಳೆ ಮುಂಗಡವಾಗಿ ಬುಕಿಂಗ್ ಆಗಿದ್ದ ಟಿಕೆಟ್ ನ ಹಣವನ್ನು ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಮಾಡಲು ನಿರ್ಧರಿಸಿದೆ.
ನವೆಂಬರ್ 25 ಮತ್ತು 26 ರಂದು ರೈಲ್ವೆ ಇಲಾಖೆಯು ಚಂಡಮಾರುತದ ಆಗಬಹುದಾದ ಅನಾಹುತ ತಪ್ಪಿಸುವ ದೃಷ್ಟಿಯಿಂದ ಹಲವಾರು ರೈಲು ಸಂಚಾರ ರದ್ದುಗೊಳಿಸಿತು.
ಸಾಮಾನ್ಯವಾಗಿ ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿರುತ್ತಾರೆ. ಅವರಿಗೆ ಕಾಯ್ದಿರಿಸಿದ ಟಿಕೆಟ್ ಹಣವನ್ನು ಮರು ಪಾವತಿ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಪ್ರಯಾಣದ ದಿನಾಂಕದಿಂದ ಆರು ತಿಂಗಳೊಳಗೆ ಈ ಹಣವನ್ನು ಪಡೆಯಬಹುದಾಗಿದೆ.
ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟಮ್ ಕೌಂಟರ್‌ಗಳಲ್ಲಿ ಟಿಕೆಟ್ ಸಲ್ಲಿಸಿ ಹಣವನ್ನು ಮರುಪಾವತಿ ಪಡೆದುಕೊಳ್ಳಬಹುದು. ಆನ್ ಲೈನ್‌ನಲ್ಲಿ ಕಾಯ್ದಿರಿಸಿದ ಟಿಕೆಟ್ ಗಳಿಗೆ ಸ್ವಯಂಪ್ರೇರಿತವಾಗಿ ಮರುಪಾವತಿ ಸೌಲಭ್ಯ ಲಭ್ಯಮಾಡಿಕೊಡಲಾಗಿದೆ.
ಚಂಡಮಾರುತದ ಮುನ್ಸೂಚನೆ ಬರುತ್ತಿದ್ದಂತೆ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಂಡಿದೆ, ರೈಲ್ವೆ ನಿಲ್ದಾಣಗಳು ಪ್ಲಾಟ್ ಫಾರ್ಮ್ ನ ಮೇಲ್ಚಾವಣಿ ತಪಾಸಣೆ, ಹೋರ್ಡಿಂಗ್ ತೆಗೆಸುವುದು, ಲೆವೆಲ್ ಕ್ರಾಸಿಂಗ್‌ಗಳಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.