ಬೆಂಗಳೂರು: ರಾಗಿ, ಜೋಳದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಕಳೆದ 10 ವರ್ಷದ ಅವಧಿಯಲ್ಲಿ ಗೊಬ್ಬರ, ಕ್ರಿಮಿನಾಶಕ ಬೆಲೆ ಮೂರು ಪಟ್ಟು ಹೆಚ್ಚಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿಯಾಗಿ ರಾಗಿ, ಜೋಳದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಮನವಿ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರಾಗಿ ಹಾಲಿ ದರ 3846 ರೂ. ನಿಂದ 5,000 ರೂ.ಗೆ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಮಾಲ್ದಂಡಿ ಜೋಳ 3225 ರೂ ನಿಂದ 4500 ರೂ., ಹೈಬ್ರಿಡ್ ಜೋಳ 3180 ರೂ. ನಿಂದ 4500 ರೂ.ರವರೆಗೆ ಹೆಚ್ಚಳ ಮಾಡುವಂತೆ ಕೋರಲಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಣೆಗೆ ರಾಗಿ 6 ಲಕ್ಷ ಟನ್ ಬದಲಿಗೆ 8 ಲಕ್ಷ ಟನ್, ಜೋಳ 2 ಲಕ್ಷ ಟನ್ ಬದಲಿಗೆ 3 ಲಕ್ಷ ಟನ್ ಖರೀದಿಗೆ ಅವಕಾಶ ಕೋರಿದ್ದು, ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.