ಪ್ರತಿಯೊಬ್ಬರೂ ಮನೆ ಖರೀದಿಸುವ ಕನಸು ಕಾಣ್ತಾರೆ. ಮನೆ ಖರೀದಿ ಹೂಡಿಕೆಯ ಒಂದು ಆಯ್ಕೆಯೂ ಹೌದು. ಹಿಂದಿನ ದಿನಗಳಲ್ಲಿ ಮನೆ ಯಜಮಾನನ ಹೆಸರಿನಲ್ಲಿ ಮನೆಗಳಿರುತ್ತಿತ್ತು. ಆದ್ರೀಗ ಇತ್ತೀಚಿನ ದಿನಗಳಲ್ಲಿ ಜನರ ಆಲೋಚನೆ ಬದಲಾಗಿದೆ. ಪ್ರಾಪರ್ಟಿ ಕನ್ಸಲ್ಟೆನ್ಸಿ ಸಂಸ್ಥೆ ಎನರಾಕ್ 2020 ರ ವರದಿಯ ಪ್ರಕಾರ, ದೇಶಾದ್ಯಂತ ಮನೆ ಖರೀದಿಸುವವರಲ್ಲಿ ಶೇಕಡಾ 77ರಷ್ಟು ಮಹಿಳೆಯರಿದ್ದಾರೆ. ಮಹಿಳೆ ಹೆಸರಿನಲ್ಲಿ ಮನೆ ಖರೀದಿ ಮಾಡುವುದ್ರಿಂದ ಕೆಲವು ರಿಯಾಯಿತಿ ಸಿಗುತ್ತದೆ.
ಕೊರೊನಾ ಮಧ್ಯೆಯೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೆಳವಣಿಗೆ ಕಾಣ್ತಿದೆ. ಮನೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ. ಮಹಿಳೆ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ರೆ ಅನೇಕ ರಾಜ್ಯಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ಮೇಲೆ ರಿಯಾಯಿತಿ ನೀಡಲಾಗ್ತಿದೆ. ಉತ್ತರ ಪ್ರದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ರೆ ಸ್ಟ್ಯಾಂಪ್ ಡ್ಯೂಟಿ ಶೇಕಡಾ ಎರಡರಿಂದ ಮೂರರಷ್ಟು ಕಡಿಮೆಯಾಗುತ್ತದೆ.
ಮನೆ ಖರೀದಿಗೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಗೃಹ ಸಾಲ ನೀಡಲಾಗುತ್ತದೆ. ಇದನ್ನು ಮಾಸಿಕ ಕಂತು ಅಥವಾ ಇಎಂಐ ಮೂಲಕ ಪಾವತಿ ಮಾಡಬೇಕಾಗುತ್ತದೆ. ಕೆಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಮಹಿಳೆಯರು ಪಡೆಯುವ ಗೃಹ ಸಾಲಕ್ಕೆ ವಿಶೇಷ ಕೊಡುಗೆ ನೀಡಲಾಗುತ್ತದೆ. ಬಡ್ಡಿಯಲ್ಲಿ ಶೇಕಡಾ 0.5ರಿಂದ ಶೇಕಡಾ 5ರವರೆಗೆ ರಿಯಾಯಿತಿ ಸಿಗುತ್ತದೆ.
ಮಹಿಳೆ ಹೆಸರಿನಲ್ಲಿ ಅಥವಾ ಜಂಟಿ ಮಾಲಿಕತ್ವದಲ್ಲಿ ಸಾಲ ತೆಗೆದುಕೊಳ್ಳುವುದರಿಂದ ಆದಾಯದ ಮೇಲೆ ಹೆಚ್ಚುವರಿ ತೆರಿಗೆ ಲಾಭವೂ ದೊರೆಯುತ್ತದೆ. ಹೆಂಡತಿಯ ಆದಾಯದ ಮೂಲವು ವಿಭಿನ್ನವಾಗಿದ್ದರೆ, ಗಂಡ ಮತ್ತು ಹೆಂಡತಿ ಇಬ್ಬರೂ ಕಂತುಗಳ ಮರುಪಾವತಿಯ ಮೇಲೆ ತೆರಿಗೆ ವಿನಾಯಿತಿ ತೆಗೆದುಕೊಳ್ಳಬಹುದು.