ನವದೆಹಲಿ: ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾದ ನಂತರ ಬೇಳೆಕಾಳುಗಳ ದರವೂ ಕೊಂಚ ಇಳಿಕೆಯಾಗಿದ್ದು, ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.
ಖಾದ್ಯ ತೈಲ ದರ ಇಳಿಕೆ ನಂತರ ಹಲವು ಬೇಳೆಕಾಳುಗಳ ಸಗಟು ಬೆಲೆ ಇಳಿಕೆಯಾಗಿದೆ. ಉದಾಹರಣೆಗೆ ಕೆಜಿಗೆ 95 ರಿಂದ 100 ರೂ.ಗೆ ತಲುಪಿದ್ದ ಸಗಟು ಬೇಳೆ ದರ ಇದೀಗ 72 ರಿಂದ 75 ರೂ.ಗೆ ಇಳಿದಿದೆ. ಸುಮಾರು 12-15 ರೂ.ನಷ್ಟು ಕಡಿಮೆಯಾಗಿದೆ.
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕೊಯ್ಲು ಮಾಡಿದ ನಂತರ ಬೇಳೆಕಾಳುಗಳು ಪ್ರಯಾಗರಾಜ್, ಮುತ್ತಿಗಂಜ್ ಮಂಡಿಯ ಸಗಟು ಮಾರುಕಟ್ಟೆಯನ್ನು ತಲುಪಿವೆ. ಸಗಟು ಮಾರುಕಟ್ಟೆಗಳಲ್ಲಿ ಬೇಳೆಕಾಳುಗಳ ಬೆಲೆಗಳು ಕಡಿಮೆಯಾಗುತ್ತಿದ್ದು, ಚಿಲ್ಲರೆ ದರಗಳು ಕೆಲವೇ ದಿನಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಬೇಳೆಕಾಳುಗಳ ಜೊತೆಗೆ ಖಾದ್ಯ ತೈಲದ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಸಾಸಿವೆ ಎಣ್ಣೆ ಲೀಟರ್‌ಗೆ 5 ರಿಂದ 10 ರೂಪಾಯಿಗಳಷ್ಟು ಅಗ್ಗದ ದರದಲ್ಲಿ ಮಾರಾಟವಾಗುತ್ತಿದೆ. ಬರೇಲಿಯ ಸಗಟು ಮಾರುಕಟ್ಟೆಯಲ್ಲಿ ಪ್ರಸ್ತುತ ಸಾಸಿವೆ ಎಣ್ಣೆ ಲೀಟರ್‌ಗೆ 168 ರೂ.ಗಳಾಗಿದೆ. ಹಿಂದೆ ಪ್ರತಿ ಲೀಟರ್‌ಗೆ 175 ರೂ. ಇತ್ತು.
ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ಮತ್ತು 10 ರೂಪಾಯಿಗಳಷ್ಟು ಕಡಿತಗೊಳಿಸಿದ ನಂತರ ಬೇಳೆಕಾಳುಗಳು ಮತ್ತು ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ನಡೆ ಅನುಸರಿಸಿ, ಹಲವಾರು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿವೆ, ಇದರ ಪರಿಣಾಮ ಅಗತ್ಯ ವಸ್ತುಗಳ ದರ ಇಳಿಕೆ ಹಾದಿಯಲ್ಲಿದೆ ಎನ್ನಲಾಗಿದೆ.