ನವದೆಹಲಿ: ಎಲ್ಲಾ ಕಾರ್ ಗಳಿಗೆ ಮುಂಭಾಗದ ಡ್ರೈವರ್ ಸೀಟ್ ಪಕ್ಕದ ಸೀಟ್ ಗೂ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸುವ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.
2021 ರ ಏಪ್ರಿಲ್ 1 ರಿಂದ ತಯಾರಾಗುವ ಎಲ್ಲಾ ಹೊಸ ಮಾದರಿಯ ಕಾರ್ ಗಳ ಮುಂದಿನ ಸೀಟುಗಳ ಪ್ರಯಾಣಿಕರ ಬದಿಯಲ್ಲಿ ಏರ್ ಬ್ಯಾಗ್ ಅಳವಡಿಕೆ ನಿಯಮ ಜಾರಿಗೆ ತರಲಾಗುತ್ತದೆ. ಪ್ರಸ್ತುತ ಇರುವ ವಾಹನಗಳಿಗೆ ಹೊಸ ನಿಯಮ ಅನುಸರಿಸುವ ಕುರಿತು ಚಿಂತನೆ ನಡೆದಿದೆ. ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಚಾಲಕನ ಪಕ್ಕದಲ್ಲಿ ವಾಹನದ ಮುಂಭಾಗದ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಏರ್‌ಬ್ಯಾಗ್ ಒದಗಿಸುವುದನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ.
2019 ರ ಜುಲೈ 1 ರಿಂದ ಜಾರಿಗೆ ಬರುವಂತೆ ಎಲ್ಲಾ ಕಾರ್ ಗಳಲ್ಲಿ ಡ್ರೈವರ್ ಸೀಟ್ ಗೆ ಏರ್ ಬ್ಯಾಗ್ ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈಗ ಡ್ರೈವರ್ ಪಕ್ಕದ ಸೀಟ್ ಗೂ ಕೂಡ ಏರ್ ಬ್ಯಾಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗ್ತಿದೆ. ಈಗಾಗಲೇ ಚಾಲನೆಯಲ್ಲಿರುವ ವಾಹನಗಳಿಗೆ 2021ರ ಜೂನ್ 1 ರವರೆಗೂ ಅವಕಾಶ ನೀಡಲಾಗುವುದು ಹೇಳಲಾಗಿದೆ.
ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ವಾಹನ ಮಾನದಂಡಗಳ ಉನ್ನತ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ. ವಾಹನಗಳಿಗೆ ಸುರಕ್ಷತೆ ವೈಶಿಷ್ಟಗಳನ್ನು ಅಳವಡಿಸುವ ಕುರಿತಾಗಿ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಗೆ ತಿದ್ದುಪಡಿ ತರಲು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ.