ತೆರಿಗೆ ಪಾವತಿಸಲು ಮಾರ್ಚ್ 31 ಕೊನೆ ದಿನ. ಈವರೆಗೂ ತೆರಿಗೆ ಪಾವತಿ ಮಾಡದ ಜನರು ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಈಗ ಹುಡುಕಾಟ ನಡೆಸುತ್ತಿದ್ದಾರೆ. ಸಂಬಳ ಪಡೆಯುವ ನೌಕರರು ತೆರಿಗೆ ಉಳಿಸಲು ಹಣಕಾಸು ಯೋಜನೆ ಬಗ್ಗೆ ತಿಳಿದಿರಬೇಕಾಗುತ್ತದೆ. ತೆರಿಗೆ ಉಳಿಸಲು ಉದ್ಯೋಗಿಗಳು ಕೆಲವು ಕಡೆ ಹೂಡಿಕೆ ಮಾಡಬಹುದು. ಸೆಕ್ಷನ್ 80 ಸಿ ಹೂಡಿಕೆಗಳು ಹೆಚ್ಚು ಜನಪ್ರಿಯವಾಗಿದ್ದರೂ, ಉದ್ಯೋಗಿಗೆ ತೆರಿಗೆ ಉಳಿತಾಯವನ್ನು ಹೆಚ್ಚಿಸಲು ಇನ್ನೂ ಹಲವು ಮಾರ್ಗಗಳಿವೆ.
ನೌಕರರ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವುದು ಒಂದು ಆಯ್ಕೆ. ಸಂಬಳ ಪಡೆಯುವ ಜನರಿಗೆ ತೆರಿಗೆ ಉಳಿತಾಯದ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಇಪಿಎಫ್ ಒಂದು. ನೌಕರರು ಮತ್ತು ಉದ್ಯೋಗದಾತರಿಬ್ಬರೂ ಇದಕ್ಕೆ ಕೊಡುಗೆ ನೀಡುತ್ತಾರೆ. ನೌಕರನು ನಿರ್ದಿಷ್ಟ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾನೆ. ಈ ಯೋಜನೆಯಡಿ ಸಿಗುವ ಆದಾಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹರಾಗಿರುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವುದು ಉಳಿತಾಯದ ಮತ್ತೊಂದು ಆಯ್ಕೆ. ಹೂಡಿಕೆ ಮೇಲಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಪಿಪಿಎಫ್ ಅಡಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆಯಿಂದ ಕಡಿತಗೊಳಿಸಲಾಗುತ್ತದೆ.
ತೆರಿಗೆ ಪ್ರಯೋಜನಗಳನ್ನು ಪಡೆಯುವ ಮೊದಲು ನಿಮ್ಮ ಸಂಬಳ ಯಾವ ವರ್ಗಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ನಿಮ್ಮ ಸಂಸ್ಥೆ ನಿಮ್ಮನ್ನು ಯಾವ ವಿಭಾಗದಲ್ಲಿಟ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವುದು ತೆರಿಗೆಯಿಂದ ವಿನಾಯಿತಿ ಪಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆಯಿರಿ. ತೆರಿಗೆ ಉಳಿಸಲು ಹೂಡಿಕೆ ಮಾಡುವ ಮೊದಲು ನಿಮ್ಮ ಸಂಬಳದ ವಿಧಾನವನ್ನು ತಿಳಿಯಬೇಕು. ಸಂಸ್ಥೆಯ ಮಾನವ ಸಂಪನ್ಮೂಲ ತಂಡದಿಂದ ಈ ಬಗ್ಗೆ ಮಾಹಿತಿ ಪಡೆಯಬಹುದು.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ನೀವು ತೆರಿಗೆಯಿಂದ ರಿಯಾಯಿತಿ ಪಡೆಯಬಹುದು. ಆದ್ರೆ ಅದಕ್ಕೆ ಒಂದು ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಎಚ್ ಆರ್ ತಂಡದಿಂದ ಮಾಹಿತಿ ಪಡೆಯಬಹುದು. ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗ. ಇದ್ರ ಪ್ರಯೋಜನವನ್ನು ಪಡೆಯಲು ಬಾಡಿಗೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀವು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ತೆರಿಗೆ ಪ್ರಯೋಜನಗಳನ್ನು ಪಡೆಯಲು ಆದಾಯ ತೆರಿಗೆ ಕಾಯ್ದೆಯ ವಿವಿಧ ಷರತ್ತುಗಳನ್ನು ಅರ್ಥಮಾಡಿಕೊಳ್ಳಬೇಕು. ತೆರಿಗೆ ಉಳಿತಾಯ ಹೂಡಿಕೆ ಆಯ್ಕೆಯಾಗಿ ಸೆಕ್ಷನ್ 80 ಸಿ ಸಾಕಷ್ಟು ಜನಪ್ರಿಯವಾಗಿದೆ. 80 ಡಿ, 80 ಇಇ, 80 ಜಿ ಮುಂತಾದ ಇತರ ವಿಭಾಗಗಳಿವೆ. ಇದು ತೆರಿಗೆ ಪ್ರಯೋಜನ ನೀಡುತ್ತದೆ. ತೆರಿಗೆ ಪ್ರಯೋಜನ ಪಡೆಯಲು ಈ ಎಲ್ಲಾ ಮಾರ್ಗವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಆಗ ಮಾತ್ರ ನಿಮ್ಮ ತೆರಿಗೆ ಹೊರೆಯನ್ನು ನೀವು ಕಡಿಮೆ ಮಾಡಿಕೊಳ್ಳಬಹುದು.
ನಿಮ್ಮ ಕೆಲ ಖರ್ಚುಗಳು ತೆರಿಗೆ ಉಳಿಸಲು ಸಹಕಾರಿ. ಮಗುವಿನ ಬೋಧನಾ ಶುಲ್ಕಗಳು, ವಿಮಾ ಕಂತುಗಳು, ಅನುಮೋದಿತ ದತ್ತಿ ಸಂಸ್ಥೆಗೆ ದೇಣಿಗೆ ಮುಂತಾದ ಖರ್ಚುಗಳನ್ನು ದಾಖಲೆ ರೂಪದಲ್ಲಿ ನೀಡಿದ್ರೆ ತೆರಿಗೆ ಕಡಿಮೆಯಾಗುತ್ತದೆ. ತರಾತುರಿ ಮಾಡದೆ ಈ ಎಲ್ಲ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ತೆರಿಗೆ ಪಾವತಿ ಮಾಡುವುದು ಉತ್ತಮ.
ತೆರಿಗೆ ಉಳಿತಾಯ ಮಾಡಬೇಕೆನ್ನುವವರು ಸಣ್ಣ ಹೂಡಿಕೆ ಮಾಡಬಹುದು. ಈಗಷ್ಟೇ ಕೆಲಸಕ್ಕೆ ಸೇರಿದ್ದರೆ ಇಎಲ್ಎಸ್ಎಸ್ ಯೋಜನೆಯಲ್ಲಿ ಪ್ರತಿ ತಿಂಗಳು 1000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಸ್ಥಿರ ಠೇವಣಿಯಲ್ಲಿ ಹಣ ಹೂಡಿಕೆ ಮಾಡಬಹುದು. 5 ವರ್ಷಗಳ ಅವಧಿ ಹೊಂದಿರುವ ತೆರಿಗೆ ಉಳಿತಾಯದ ಸ್ಥಿರ ಠೇವಣಿ (ಎಫ್ಡಿ) ಸಹ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅರ್ಹವಾಗಿದೆ.
ಸುಕನ್ಯಾ ಸಮೃದ್ಧಿ ಖಾತೆ ಕೂಡ ತೆರಿಗೆ ಉಳಿತಾಯದ ಯೋಜನೆಯಾಗಿದೆ. ಇದನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗಾಗಿ ಮತ್ತು ಗರಿಷ್ಠ 2 ಹೆಣ್ಣು ಮಕ್ಕಳಿಗೆ ಲಭ್ಯವಿದೆ. ಈ ಖಾತೆ ಕೂಡ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ಗೃಹ ಸಾಲದ ಮರುಪಾವತಿ ಮೇಲೆ 1,50,000 ರೂಪಾಯಿಗಳವರೆಗೆ ತೆರಿಗೆ ಕಡಿತಕ್ಕೆ ಅನುಮತಿ ನೀಡಲಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚುವರಿ ತೆರಿಗೆ ಉಳಿತಾಯ ಮಾಡಬಹುದು.
ಭತ್ಯೆಗಳು ಮತ್ತು ಕೂಪನ್ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಸಂಬಳಕ್ಕೆ ತೆರಿಗೆ ವಿಧಿಸಲಾಗುತ್ತದೆ. ಭತ್ಯೆ ಮತ್ತು ಕೂಪನ್ಗೆ ತೆರಿಗೆ ವಿಧಿಸಲಾಗುವುದಿಲ್ಲ. ಇದೇ ಕಾರಣಕ್ಕೆ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ವಿವಿಧ ಕೂಪನ್ ನೀಡುತ್ತಾರೆ. ಇದು ಕೂಡ ತೆರಿಗೆ ಉಳಿಸಲು ನೆರವಾಗುತ್ತದೆ. ಕೂಪನ್ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾದರೆ ಮಾತ್ರ ಇದು ಪ್ರಯೋಜನಕಾರಿಯಾಗಿದೆ. ಕಂಪನಿ ಕೂಪನ್ ನೀಡುತ್ತಿದ್ದರೆ ಅಥವಾ ಭತ್ಯೆ ನೀಡುತ್ತಿದ್ದರೆ ಅದನ್ನು ಸ್ವೀಕರಿಸಿ.
ತೆರಿಗೆ ಉಳಿಸುವ ನೌಕರನ ಮೊದಲ ಆಯ್ಕೆ ಪ್ರಯಾಣ ಭತ್ಯೆ. ದೇಶಿಯ ರಜಾದಿನಗಳಿಗಾಗಿ ಮಾಡಿದ ವೆಚ್ಚದ ಮಾಹಿತಿಯನ್ನು ಎಲ್ಟಿಎ ನೀಡುತ್ತದೆ. ಇದು ಪ್ರಯಾಣ ವೆಚ್ಚವನ್ನು ಮಾತ್ರ ಒಳಗೊಂಡಿರುತ್ತದೆ. ಇತರ ವೆಚ್ಚಗಳಿಗೆ ಇದು ಅನ್ವಯಿಸುವುದಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಪ್ರವಾಸಗಳಿಗೆ ಎಲ್ಟಿಎ ಲಭ್ಯವಿದೆ.
ಸಂಬಳ ಪಡೆಯುವ ವ್ಯಕ್ತಿಗಳಿಗೆ ತೆರಿಗೆ ಉಳಿಸಲು ರಜಾ ಎನ್ಕ್ಯಾಶ್ಮೆಂಟ್ ಮತ್ತೊಂದು ಮಾರ್ಗವಾಗಿದೆ. ಸಂಸ್ಥೆ ನೀಡುವ ಎಲ್ಲ ರಜಾ ಸೌಲಭ್ಯ ಪಡೆಯಿರಿ. ನೀವು ರಜೆ ಪಡೆಯದೆ ಹೋದಲ್ಲಿ ಕಂಪನಿ ನಿಮಗೆ ಅದಕ್ಕೆ ಹಣ ನೀಡುತ್ತದೆ. ಈ ಮೊತ್ತಕ್ಕೆ ನಿಮಗೆ ತೆರಿಗೆ ವಿಧಿಸಲಾಗುತ್ತದೆ.