ಕಂಪನಿ ಬದಲಿಸಿದಾಗ ಪಿಎಫ್ ವಿತ್ ಡ್ರಾ ಬೇಡ ಎನ್ನುವವರು ಇದನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಯುಎಎನ್ ಸಂಖ್ಯೆಯಿದ್ದರೆ ವರ್ಗಾವಣೆ ಮತ್ತಷ್ಟು ಸುಲಭ. ಆದ್ರೆ ಕಂಪನಿ ಮುಚ್ಚಿದಾಗ ಪಿಎಫ್ ಹಣ ಪಡೆಯುವುದು ಕಷ್ಟ. ಪಿಎಫ್ ಖಾತೆಯನ್ನು ಪ್ರಮಾಣೀಕರಿಸಲು ಯಾರೂ ಇರದ ಕಾರಣ ಸಮಸ್ಯೆಯಾಗುತ್ತದೆ. ಇಂಥ ಪ್ರಕರಣದಲ್ಲಿ ಏನು ಮಾಡಬೇಕು? ಈಗ ಸ್ಥಗಿತಗೊಂಡ ಅಥವಾ ಮುಚ್ಚಿದ ಕಂಪನಿಯಲ್ಲಿ ಸಿಲುಕಿರುವ ನಿಮ್ಮ ಪಿಎಫ್ ಹಣವನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿ ಇಲ್ಲಿದೆ.
ನೀವು ಕಂಪನಿ ಬದಲಿಸಿದ್ದು, ಪಿಎಫ್ ವರ್ಗಾವಣೆ ಮಾಡಿಲ್ಲವೆಂದ ಸಂದರ್ಭದಲ್ಲಿ ಹಳೆ ಕಂಪನಿ ಮುಚ್ಚಿದ್ರೆ ಪಿಎಫ್ ಪಡೆಯಲು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಪಿಎಫ್ ಖಾತೆ 36 ತಿಂಗಳು ಸಕ್ರಿಯವಾಗಿರುತ್ತದೆ. ನಿಮಗೆ ಈ ಅವಧಿಯಲ್ಲಿ ಬಡ್ಡಿ ಸಿಗುತ್ತದೆ. ಆದ್ರೆ ಪಿಎಫ್ ಪ್ರಮಾಣೀಕರಿಸಲು ಯಾರೂ ಇಲ್ಲವೆಂದಾಗ ಬ್ಯಾಂಕ್ ಕೆವೈಸಿಯನ್ನು ಪ್ರಮಾಣೀಕರಣಕ್ಕಾಗಿ ಬಳಸಲಾಗುತ್ತದೆ.
ನಿಮಗೆ ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ರೇಷನ್ ಕಾರ್ಡ್, ಇಎಸ್ಐ ಗುರುತಿನ ಚೀಟಿ, ಚಾಲನಾ ಪರವಾನಿಗೆಗಳು ಕೆವೈಸಿಗೆ ಬೇಕಾಗುತ್ತದೆ. ಆಧಾರ್ ಕಾರ್ಡನ್ನು ಕೂಡ ನೀವು ನೀಡಬಹುದು. ಕೆವೈಸಿಗೆ ಅಗತ್ಯವಾದ ದಾಖಲೆಗಳನ್ನು ಹೊಂದಿದ್ದರೆ, ಭವಿಷ್ಯ ನಿಧಿ ಆಯುಕ್ತರು ಅಥವಾ ಇತರ ಅಧಿಕಾರಿ, ಪಿಎಫ್ ಹಣ ವಿತ್ ಡ್ರಾ ಅಥವಾ ವರ್ಗಾವಣೆಗೆ ಅನುಮೋದನೆ ನೀಡುತ್ತಾರೆ. 50,000 ಕ್ಕಿಂತ ಹೆಚ್ಚಿನ ಹಣಕ್ಕೆ ಸಹಾಯಕ ಭವಿಷ್ಯ ನಿಧಿ ಆಯುಕ್ತರ ಅನುಮೋದನೆ ಅಗತ್ಯವಿದೆ. 50,000 ರೂಪಾಯಿವರೆಗೆ, 25 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತಕ್ಕೆ ಅಧಿಕಾರಿಗಳು ಅನುಮೋದನೆ ನೀಡಬಹುದು. 25 ಸಾವಿರ ರೂಪಾಯಿಗಿಂತ ಕಡಿಮೆ ಹಣಕ್ಕೆ ಸಹಾಯಕರು ಅನುಮೋದನೆ ನೀಡುತ್ತಾರೆ.