ನವದೆಹಲಿ: ನಿರ್ಮಾಣ, ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯ ಪರಿಣಾಮ ಮನೆಗಳ ಬೆಲೆ ಶೇಕಡ 15 ರಷ್ಟರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಕೊರೋನಾ ಲಾಕ್ಡೌನ್ ಮತ್ತು ಕಾರ್ಮಿಕರ ಕೊರತೆ ಕಾರಣದಿಂದ ನಿರ್ಮಾಣ ಕಾರ್ಯ ಚಟುವಟಿಕೆಗಳು ವಿಳಂಬವಾಗಿದೆ. ನಿರ್ಮಾಣ ವೆಚ್ಚ ಕಳೆದ 18 ತಿಂಗಳಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆಯಾಗುವ ಸೂಚನೆ ಕಂಡುಬರುತ್ತಿಲ್ಲ. ನಿರ್ಮಾಣಗಾರರು ಹೆಚ್ಚುವರಿ ವೆಚ್ಚವನ್ನು ಮನೆ ಖರೀದಿಸುವವರ ಮೇಲೆ ವರ್ಗಾಯಿಸಲಿದ್ದಾರೆ.
ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟ(ಕ್ರೆಡಾಯ್) ಒಂದು ವರ್ಷದ ಅವಧಿಯಲ್ಲಿ ಕಬ್ಬಿಣ ಮತ್ತು ಸಿಮೆಂಟ್ ದರದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದೆ. ನಿರ್ಮಾಣ ಸಾಮಗ್ರಿಗಳ ದರ ನಿಯಂತ್ರಣಕ್ಕೆ ಬರದಿದ್ದರೆ, ಮನೆಗಳ ಬೆಲೆ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಬಹುದು ಎಂದು ತಿಳಿಸಿದೆ.
ನಿರ್ಮಾಣ ಸಾಮಗ್ರಿಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸರಕು ಮತ್ತು ಸೇವಾ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಒಕ್ಕೂಟದ ಅಧ್ಯಕ್ಷ ಹರ್ಷವರ್ಧನ್ ಪಠೋಡಿಯಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಒಕ್ಕೂಟದಲ್ಲಿ 13 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ನಿರ್ಮಾಣಗಾರರು ಹೆಚ್ಚುವರಿ ವೆಚ್ಚವನ್ನು ಹೊರುವು ಕಷ್ಟವಾಗುತ್ತದೆ. ಹೀಗಾಗಿ ಮನೆ ಖರೀದಿದಾರರ ಮೇಲೆ ಹೊರೆ ವರ್ಗಾಯಿಸಲಿದ್ದಾರೆ. ಹೀಗಾಗಿ ಮನೆಗಳ ಬೆಲೆ ಶೇ. 15 ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.