ಬೆಂಗಳೂರು: ರಾಜ್ಯ ಸರ್ಕಾರ ಸ್ಥಿರಾಸ್ತಿ ಮಾರ್ಗಸೂಚಿ ದರದ ಮೇಲೆ ಶೇಕಡ 10 ರಷ್ಟು ರಿಯಾಯಿತಿ ಘೋಷಿಸಿದ್ದು, ಆಸ್ತಿ ನೋಂದಣಿಗೆ ಜನ ಮುಗಿಬಿದ್ದಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜನಸಂದಣಿ ಕಂಡುಬಂದಿದೆ. ಮಾರ್ಚ್ 31 ರವರೆಗೆ ರಿಯಾಯಿತಿ ಸೌಲಭ್ಯ ನೀಡಿದ್ದು, ರಾತ್ರಿ 8 ಗಂಟೆಯವರೆಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆ ಆದಾಯ ಗುರಿ ಮೀರಿ 1000 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ.
ಕೋವಿಡ್ ಕಾರಣದಿಂದ ಆಸ್ತಿ ಮಾರಾಟ ಮತ್ತು ಖರೀದಿ ಪ್ರಮಾಣ ಭಾರಿ ಇಳಿಕೆ ಕಂಡಿತ್ತು. ಕೊರೋನಾ ಕಡಿಮೆಯಾದ ನಂತರ ಸ್ಥಿರಾಸ್ತಿ ಮಾರ್ಗಸೂಚಿ ದರದ ಮೇಲೆ ಸರ್ಕಾರ ಶೇಕಡ 10 ರಷ್ಟು ರಿಯಾಯಿತಿ ಘೋಷಿಸಿದೆ. ಇದರಿಂದ ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆ ಜಾಸ್ತಿಯಾಗಿದೆ. ಇನ್ನೂ ಒಂದು ತಿಂಗಳು ಶೇಕಡ 10 ರಷ್ಟು ರಿಯಾಯಿತಿ ಮುಂದುವರೆಸಲು ಕಂದಾಯ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಮಾರ್ಚ್ 31 ರವರೆಗೆ ರಿಯಾಯಿತಿ ನೀಡಲಿದ್ದು, ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ವಿನಾಯಿತಿ ಸೌಲಭ್ಯವನ್ನು ವಿಸ್ತರಿಸಬೇಕೆಂಬ ಬೇಡಿಕೆ ಇದ್ದು, ಮಾರ್ಚ್ 31ರ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.