ಬೆಂಗಳೂರು: ಆಸ್ತಿ ಖರೀದಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇಕಡ 10 ರಷ್ಟು ಇಳಿಕೆ ಮಾಡಲಾಗಿದ್ದು, ಜನವರಿ 1 ರಿಂದ ಮೂರು ತಿಂಗಳು ಅನ್ವಯವಾಗಲಿದೆ.
ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಮೂರು ತಿಂಗಳ ಕಾಲ ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರ ಶೇಕಡ 10ರಷ್ಟು ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದೆ.
ಕೃಷಿ ಜಮೀನು, ಕೃಷಿಯೇತರ ಜಮೀನು, ಸೈಟ್, ಕಟ್ಟಡ, ಅಪಾರ್ಟ್ಮೆಂಟ್ ಮತ್ತು ಫ್ಲಾಟ್ ಗಳ ಮಾರ್ಗಸೂಚಿ ದರವನ್ನು ಶೇಕಡ 10 ರಷ್ಟು ಇಳಿಕೆ ಮಾಡಲಾಗಿದೆ. ಜನವರಿ 1 ರಿಂದ ಮಾರ್ಚ್ 31 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ಆಸ್ತಿ ಖರೀದಿ ಸಂದರ್ಭದಲ್ಲಿ ಮಾರ್ಗಸೂಚಿ ದರದ ಶೇಕಡ 6.5 ರಷ್ಟು ಮೊತ್ತವನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಬೇಕಿದೆ. ಮಾರ್ಗಸೂಚಿ ದರ ಶೇಕಡ 10 ರಷ್ಟು ಕಡಿಮೆಯಾಗುವುದರಿಂದ ಖರೀದಿದಾರರಿಗೆ ಅನುಕೂಲವಾಗುತ್ತದೆ.
ಆಸ್ತಿ ಖರೀದಿ, ಕರಾರುಪತ್ರ, ಭೋಗ್ಯ ಪತ್ರಗಳನ್ನು ನೋಂದಣಿ ಮಾಡಿಸುವ ಸಂದರ್ಭದಲ್ಲಿ ಪಾವತಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಶೇಕಡ 10 ರಷ್ಟು ಮಾರ್ಗಸೂಚಿ ದರ ಕಡಿತ ಮಾಡಲಾಗಿದೆ. ಇದರಿಂದ ಆಸ್ತಿ ಖರೀದಿ, ಮಾರಾಟ ಹೆಚ್ಚಳವಾಗಿ ಸರ್ಕಾರದ ಆದಾಯ ಹೆಚ್ಚಳ ನಿರೀಕ್ಷಿಸಲಾಗಿದೆ.