
ಕೊರೋನಾ ಎಫೆಕ್ಟ್ ಜನರಿಗಷ್ಟೆ ಅಲ್ಲ ಸಾಕು ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತಿದೆ. ಖಾಸಗಿ ಜೆಟ್ ವಿಮಾನಗಳು ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ಕರೆತರಲು ಪ್ರತಿ ಸೀಟಿನ ಟಿಕೆಟ್ ದರವನ್ನು 1.6 ಲಕ್ಷ ರೂ.ನಿಗದಿ ಮಾಡಿದೆ. ಹೀಗಾಗಿ ಸಾಕು ಪ್ರಾಣಿ ಮಾಲಿಕರು ಪ್ರಾಣಿಗಳನ್ನು ಜತೆಗೆ ಕರೆದೊಯ್ಯಲು ಹಿಂದೆ ಮುಂದೆ ನೋಡುವಂತಾಗಿದೆ.
ಮುಂಬೈ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಪ್ರಯಾಣಿಕರೊಬ್ಬರು ತನ್ನ ಸಂಬಂಧಿಕರಿಗೆ ಮುಂಬೈಗೆ ಪ್ರಯಾಣಿಸಲು ಖಾಸಗಿ ಜೆಟ್ ವ್ಯವಸ್ಥೆ ಮಾಡುತ್ತಿದ್ದಾಗ ಈ ವಿಚಾರ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.
ಕೆಲವರು ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಬಯಸಿದ್ದರು ಆದರೆ ಅವಕಾಶ ಸಿಗದಾಗ ನಾನು ಮತ್ತೊಂದು ಜೆಟ್ ವ್ಯವಸ್ಥೆ ಮಾಡಲು ನಿರ್ಧರಿಸಿ ಖಾಸಗಿ ಕಂಪನಿಯನ್ನು ಸಂಪರ್ಕಿಸಿದೆ ಎಂದು ಆ ಪ್ರಯಾಣಿಕರು ಹೇಳಿಕೊಂಡಿದ್ದಾರೆ. ಸಾಕುಪ್ರಾಣಿಗಳಿಗೆ ವಿಮಾನ ನೀಡಲು ಖಾಸಗಿ ಜೆಟ್ ನವರು ಒಪ್ಪಿದರು. ಇಲ್ಲಿಯವರೆಗೆ ನಾಲ್ಕು ಜನರು ತಮ್ಮ ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ತರಲು ಒಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಯಾವ ವಿಮಾನವನ್ನು ಸಾಗಾಣಿಕೆ ಬಳಸಬೇಕೆಂಬುದನ್ನು ನಾವು ಇನ್ನೂ ನಿರ್ಧರಿಸಿಲ್ಲ, ಆದರೆ ಇದು ಬಹುಶಃ 5 ರಿಂದ 8 ಪ್ರಯಾಣಿಕರನ್ನು ಕೂರಿಸಬಲ್ಲ ಟರ್ಬೊ-ಪ್ರಾಪ್ ವಿಮಾನವಾಗಿರಬಹುದು. ಕೊರೋನ ವೈರಸ್ ತಡೆಗಟ್ಟಲು ಕಂಪನಿಯು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿದೆ. ಪ್ರಾಣಿಗಳನ್ನು ಪಂಜರಗಳಲ್ಲಿ ಇರಿಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆಯವರು ಉಲ್ಲೇಖಿಸಿದ್ದಾರೆ.
ಸಾಕುಪ್ರಾಣಿಗಳು ವಿಮಾನವನ್ನು ಹತ್ತುವ ಮೊದಲು ತಾಪಮಾನ ತಪಾಸಣೆಗೊಳಪಡಿಸಲಾಗುತ್ತದೆ. ಮತ್ತು ಅವುಗಳ ನಿರ್ವಹಣಾಕಾರರು ಸಹ ಜತೆಗೆ ಹೋಗುತ್ತಾರೆ ಎಂದು ಖಾಸಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.