ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಉದ್ಯೋಗಿಗಳು ಕಂಪನಿ ಬದಲಿಸಿದರೆ ಪಿಎಫ್ ಜೊತೆಗೆ ಗ್ರಾಚ್ಯುಟಿ ವರ್ಗಾವಣೆಯನ್ನು ಪಡೆಯಬಹುದು. ಕಂಪನಿ ಬದಲಿಸಿದಾಗ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸಬಹುದು. ಇದೇ ರೀತಿ ಇನ್ಮುಂದೆ ಗ್ರಾಚ್ಯುಟಿಯನ್ನು ಕೂಡ ವರ್ಗಾಯಿಸಬಹುದು. ಸರ್ಕಾರ, ಯೂನಿಯನ್ ಮತ್ತು ಕೈಗಾರಿಕೆಗಳ ನಡುವೆ ಒಪ್ಪಂದ ಮಾಡಿಕೊಂಡಿದೆ. ಇದನ್ನು ಶೀಘ್ರದಲ್ಲಿಯೇ ಜಾರಿಗೆ ತರಲಿದೆ.
ಖಾಸಗಿ ವಲಯದ ಉದ್ಯೋಗಿಗಳು ಪಿಎಫ್‌ನಂತಹ ಗ್ರಾಚ್ಯುಟಿ ವರ್ಗಾಯಿಸುವ ಆಯ್ಕೆಯನ್ನು ಪಡೆಯುತ್ತಾರೆ. ಗ್ರಾಚ್ಯುಟಿ ಪೋರ್ಟಬಿಲಿಟಿ ಕುರಿತ ಒಪ್ಪಂದವನ್ನು ಒಪ್ಪಿದ ನಂತರ, ಕೆಲಸವನ್ನು ಬದಲಾಯಿಸಿದ ನಂತರ, ಗ್ರಾಚ್ಯುಟಿಯನ್ನು ಪಿಎಫ್‌ನಂತೆ ವರ್ಗಾಯಿಸಲಾಗುತ್ತದೆ.
ಮಾಧ್ಯಮಗಳ ವರದಿ ಪ್ರಕಾರ, ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ. ಇದ್ರ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಕೈಗಾರಿಕಾ ಸಚಿವಾಲಯದ ಸಭೆಯಲ್ಲಿ ಚರ್ಚಿಸಲಾಗಿದೆ. ಕೆಲಸದ ದಿನಗಳನ್ನು ವಿಸ್ತರಿಸಲು ಉದ್ಯಮ ಒಪ್ಪಿಕೊಂಡಿಲ್ಲ. ಗ್ರಾಚ್ಯುಟಿಗಾಗಿ 15 ರಿಂದ 30 ಕೆಲಸದ ದಿನಗಳ ಪ್ರಸ್ತಾಪವನ್ನು ಉದ್ಯಮಗಳು ತಳ್ಳಿಹಾಕಿವೆ ಎನ್ನಲಾಗಿದೆ. ಸಾಮಾನ್ಯವಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರು ಕೆಲಸ ಬದಲಿಸುತ್ತಾರೆ. ಕೆಲಸ ಬದಲಿಸಿದ ನಂತ್ರ ಅನೇಕ ನೌಕರರು ತಮ್ಮ ಪಿಎಫ್ ಖಾತೆಯನ್ನೂ ವರ್ಗಾಯಿಸುತ್ತಾರೆ. ಆದ್ರೆ ಈವರೆಗೆ ಗ್ರಾಚ್ಯುಟಿ ವರ್ಗಾವಣೆಯಾಗ್ತಿರಲಿಲ್ಲ. ಗ್ರಾಚ್ಯುಟಿ ವರ್ಗಾವಣೆ ಲಕ್ಷಾಂತರ ನೌಕರರಿಗೆ ನೆಮ್ಮದಿ ನೀಡಲಿದೆ.
5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ ನಂತರ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ. ಪಾವತಿ ಗ್ರಾಚ್ಯುಟಿ ಕಾಯ್ದೆ 1972 ರ ಅಡಿಯಲ್ಲಿ, ಕಂಪನಿಯು ತನ್ನ ಉದ್ಯೋಗಿಗೆ ಗ್ರಾಚ್ಯುಟಿ ಪಾವತಿಸಬೇಕಾಗುತ್ತದೆ. ನಿವೃತ್ತಿಯಾಗುವ ನೌಕರನಿಗೆ, ಅನಾರೋಗ್ಯದಿಂದ ಅಂಗವೈಕಲ್ಯಕ್ಕೊಳಗಾದ ಅಥವಾ ಸಾವನ್ನಪ್ಪಿದ ವ್ಯಕ್ತಿಗೆ ಕಂಪನಿ ಗ್ರಾಚ್ಯುಟಿ ನೀಡಬೇಕಾಗುತ್ತದೆ.