ನವದೆಹಲಿ: ಹೊಸ ವರ್ಷಕ್ಕೆ ಹೊಸ ಟಿವಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಎಲ್ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷೀನ್ ಗಳಂತಹ ಗೃಹೋಪಯೋಗಿ ವಸ್ತುಗಳ ಬೆಲೆ ಜನವರಿಯಿಂದ ಶೇಕಡ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಟಿವಿ ಪ್ಯಾನಲ್ ಗಳ ಬೆಲೆ ಎರಡುಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಉತ್ಪಾದನಾ ವೆಚ್ಚ ಕೂಡ ಜಾಸ್ತಿಯಾಗಿದೆ. ಈ ಕಾರಣ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಬೆಲೆ ಏರಿಕೆ ಅನಿವಾರ್ಯ ಎಂದು ಉತ್ಪಾದಕ ಕಂಪನಿಗಳು ಹೇಳಿವೆ.
ಸರಕುಗಳ ಬೆಲೆ ಹೆಚ್ಚಳ ಮುಂದಿನ ದಿನಗಳಲ್ಲಿ ಉತ್ಪನ್ನದ ಮೇಲೆ ಪರಿಣಾಮ ಬೀರುವುದರಿಂದ ಸಹಜವಾಗಿಯೇ ಬೆಲೆ ಶೇಕಡ 6 ರಿಂದ 7 ರಷ್ಟು ಹೆಚ್ಚಾಗಲಿದೆ. ಇಲ್ಲವೇ ಶೇಕಡ 10 ರಿಂದ 11 ರಷ್ಟು ಹೆಚ್ಚಾಗಬಹುದು ಎಂದು ಪ್ಯಾನಾಸೋನಿಕ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಓ ಮನೀಶ್ ಶರ್ಮಾ ಹೇಳಿದ್ದಾರೆ.
ಎಲ್.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾ ಕೂಡ ಜನವರಿ 1 ರಿಂದ ತನ್ನ ಉತ್ಪನ್ನಗಳಲ್ಲಿ ಶೇಕಡ 7 ರಷ್ಟು ಬೆಲೆ ಹೆಚ್ಚಳಕ್ಕೆ ತೀರ್ಮಾನಿಸಿದೆ. ಎಲ್.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾ ಗೃಹೋಪಯೋಗಿ ವಸ್ತುಗಳ ವಿಭಾಗದ ಉಪಾಧ್ಯಕ್ಷ ವಿಜಯ್ ಬಾಬು ಅವರ ಪ್ರಕಾರ, ಜನವರಿಯಿಂದ ಟಿವಿ, ವಾಷಿಂಗ್ ಮೆಷೀನ್, ರೆಫ್ರಿಜರೇಟರ್ ಸೇರಿದಂತೆ ಎಲ್ಲ ಉತ್ಪನ್ನಗಳ ಮೇಲೆ ಶೇಕಡ 7 ರಷ್ಟು ಬೆಲೆ ಜಾಸ್ತಿಯಾಗಲಿದೆ.
ಕಚ್ಚಾವಸ್ತುಗಳ ಬೆಲೆ ಜೊತೆಗೆ ಉಪಕರಣಗಳ ಬೆಲೆ ಹೆಚ್ಚಾದ ಕಾರಣ ಸೋನಿ ಇಂಡಿಯಾ ಕೂಡ ಬೆಲೆ ಹೆಚ್ಚಳದ ಬೆಳವಣಿಗೆಯನ್ನು ಗಮನಿಸುತ್ತಿದೆ. ಸೋನಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ನಯ್ಯರ್, ಬೆಲೆ ಏರಿಕೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಬೆಳವಣಿಗೆ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.