ನವದೆಹಲಿ: ಭಾರತದಲ್ಲಿ ಆಹಾರ, ವಸತಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ಒತ್ತಡದಲ್ಲಿದ್ದಾರೆ.
ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದರೊಂದಿಗೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕಾರ್ ಗಳು, ಸಿಮೆಂಟ್, ಇಂಧನ ಮತ್ತು ವಸತಿಗಳ ಬೆಲೆ ಗಗನಕ್ಕೇರುತ್ತಿರುವುದು ಜನರ ಸಂಕಷ್ಟ ಹೆಚ್ಚಿಸುತ್ತಿದೆ.
ನಿಂಬೆಹಣ್ಣು ಕೆಜಿಗೆ 300-400 ರೂ. ಇದ್ದು, ಇಷ್ಟೊಂದು ಬೆಲೆಗೆ ಲಿಂಬೆ ಹಣ್ಣು ಖರೀದಿ ಜ್ಯೂಸ್ ಮಾಡಿಕೊಂಡು ಕುಡಿಯುವುದು ಸುಲಭದ ಮಾತಲ್ಲ! ಕೇವಲ ನಿಂಬೆ ಹಣ್ಣಲ್ಲ, ಜೀರಿಗೆ, ಕೊತ್ತಂಬರಿ, ಮೆಣಸಿನಕಾಯಿ ಬೆಲೆ ಶೇ.40-60 ರಷ್ಟು ಏರಿಕೆಯಾಗಿದೆ.
ಭಾರತೀಯ ಮನೆಗಳಲ್ಲಿ ಸಾಮಾನ್ಯ ತರಕಾರಿಯಾಗಿರುವ ಬೀನ್ಸ್ ಬೆಲೆ ಕೆಜಿಗೆ 120 ರೂ.ಗೆ ಏರಿಕೆಯಾಗಿದೆ. ತಿಂಗಳ ಹಿಂದೆ ಕೆಜಿಗೆ 40 ರೂ.ಗೆ ಮಾರಾಟವಾಗುತ್ತಿದ್ದ ಹೂಕೋಸು ಈಗ ಹಲವೆಡೆ ದುಪ್ಪಟ್ಟು ದರದಲ್ಲಿ 80 ರೂ.ಗೆ ಮಾರಾಟವಾಗುತ್ತಿದೆ.
ಸಾಮಾನ್ಯ ಜನರ ಸಂಕಷ್ಟಗಳು ತರಕಾರಿ ಬೆಲೆಗೆ ಸೀಮಿತವಾಗಿಲ್ಲ; ಇತ್ತೀಚಿನ ತಿಂಗಳುಗಳಲ್ಲಿ ಹಾಲಿನ ದರವೂ ಏರಿಕೆಯಾಗಿದೆ.
ಫೆಬ್ರವರಿ 28 ರಂದು, ಅಮುಲ್ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂ. ಹೆಚ್ಚಿಸುತ್ತಿರುವುದಾಗಿ ಘೋಷಿಸಿದ್ದು, ಇದರ ಪರಿಣಾಮವಾಗಿ MRP ಗಳಲ್ಲಿ ಶೇಕಡ 4 ರಷ್ಟು ಹೆಚ್ಚಳವಾಗಿದೆ. ಮದರ್ ಡೈರಿಯು ಹಾಲಿನ ದರವನ್ನು ಲೀಟರ್ ಗೆ 2 ರೂ.ಗಳಷ್ಟು ಹೆಚ್ಚಿಸಿದೆ.
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಅವಲಂಬಿತವಾದ ಹೆಚ್ಚಿನ ವಹಿವಾಟು ವೆಚ್ಚಗಳು ಇದಕ್ಕೆ ಕಾರಣವಾಗಿವೆ. ಕಳೆದ 15 ದಿನಗಳಲ್ಲಿ 14 ನೇ ಬಾರಿಗೆ ಇಂಧನ ಬೆಲೆ ಏರಿಕೆಯಾಗಿದ್ದು, ಕಳೆದ 16 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 10 ರೂ. ಹೆಚ್ಚಳವಾಗಿದೆ. CNG ಬೆಲೆಗಳು ಕಳೆದ ಆರು ದಿನಗಳಲ್ಲಿ ಕೆಜಿಗೆ 9.10 ರೂ. ಹೆಚ್ಚಾಗಿದೆ. ಹೀಗಿರುವಾಗ ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ತರಕಾರಿ ದಿನಸಿ ಮೊದಲಾದ ಅಗತ್ಯ ವಸ್ತುಗಳು, ಕಟ್ಟಡ ನಿರ್ಮಾಣ ಸಾಮಗ್ತಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದು ಬಡವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.